ಸುದ್ದಿ 

ಏಕತೆ ಬಹುತ್ವಕ್ಕೆ ವಿರುದ್ಧವಲ್ಲ: ಪ್ರೊ. ಹೆಚ್. ಎಸ್. ಶಿವಪ್ರಕಾಶ್

Taluknewsmedia.com

ತುಮಕೂರು: ನಮ್ಮಲ್ಲಿ ಏಕತೆ ಇದ್ದರೂ ಅದು ಬಹುತ್ವಕ್ಕೆ ವಿರುದ್ಧವಾಗಿಲ್ಲ. ಏಕರಸತ್ವವನ್ನು ಒಳಗೊಂಡಿರುವ ಬಹುತ್ವ ನಮ್ಮ ಭಾರತೀಯ ಸಂಸ್ಕೃತಿಯನ್ನು ಒಳಗೊಂಡಿದೆ ಎಂದು ಬಹುಮುಖಿ ಸಂಸ್ಕೃತಿ ಚಿಂತಕ ಪ್ರೊ. ಹೆಚ್. ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಲಾಸಿರಿ ಕಾಲೇಜು ವಾರ್ಷಿಕೋತ್ಸವ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರ ಮುಖಾ- ಮುಖಿಯಿಂದಾಗಿ ಜನಪದ ಕಲೆ ಸಂಸ್ಕೃತಿಗಳು ತಮ್ಮನ್ನು ತಾವು ಬಿಂಬಿಸಿಕೊಂಡಿವೆ. ಯುವ ಸಮುದಾಯವು ಅಕ್ಷರ ಬಲ್ಲೆವೆಂದು ಅಹಂಕಾರ ಪಡದೆ ಜನಪದ ಗೌರವಿಸುವ ಕೆಲಸವಾಗಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಭಾರತವು ಬಹುತ್ವ ಸಂಸ್ಕೃತಿಯನ್ನು ಒಳಗೊಂಡಿದೆ. ಆದರೆ ಇತ್ತೀಚಿಗೆ ಜನಪದ ಕಲೆಗಳನ್ನು ತಾತ್ಸಾರ ಮನೋಭಾವದಿಂದ ಕಾಣಲಾಗುತ್ತಿದೆ ಎಂದರು.
ಇವತ್ತಿನ ಶಿಕ್ಷಣ ಪದ್ದತಿಯು ನೆಲಮೂಲ ಸಂಸ್ಕೃತಿಯನ್ನು ಆಪೋಶನ ಪಡೆಯುತ್ತಿದೆ. ನಾವು ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಭಾರತದ ಬಹುತ್ವ ಸಂಸ್ಕೃತಿಯು ಒಡೆದು ಹೋಗುತ್ತದೆ. ಆದ್ದರಿಂದಾಗಿ ಬಹುತ್ವದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಸಮಾಜದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸದೃಢ ಬುನಾದಿಯನ್ನು ಹಾಕಿ ಕೊಡುವುದು ಮುಖ್ಯ ಎಂದರು. ವಿದ್ಯಾರ್ಥಿಗಳು ತಮ್ಮನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಅದರ ಜೊತೆಗೆ ಕಲೆ ಸಂಸ್ಕೃತಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಮುಖ್ಯ. ಇದರಿಂದಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತೊಗಲುಗೊಂಬೆ ಕಲಾವಿದೆ ಜಯಂತಮ್ಮ, ವಾಸವಿ ಸಂಘದ ಅಧ್ಯಕ್ಷ ಆರ್ ಎಲ್ ರಮೇಶ್ ಬಾಬು ಅವರನ್ನು ಗೌರವಿಸಲಾಯಿತು.

ತುಮಕೂರು ವಿವಿ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ, ಪ್ರಾಂಶುಪಾಲ ಬಿ. ಕರಿಯಣ್ಣ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಡಾ. ಶಿವಣ್ಣ ಬೆಳವಾಡಿ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಸುದೀಪ್ ಕುಮಾರ್ ಆರ್. ಉಪಸ್ಥಿತರಿದ್ದರು.

Related posts

Leave a Comment