ಸುದ್ದಿ 

ಎಲ್‌ಕೆಜಿ–ಯುಕೆಜಿ ಮಕ್ಕಳಿಗೂ ಮಧ್ಯಾಹ್ನದ ಊಟ: ಸರ್ಕಾರದ ಹೊಸ ಆದೇಶ ಜಾರಿ

Taluknewsmedia.com

ಎಲ್‌ಕೆಜಿ–ಯುಕೆಜಿ ಮಕ್ಕಳಿಗೂ ಮಧ್ಯಾಹ್ನದ ಊಟ: ಸರ್ಕಾರದ ಹೊಸ ಆದೇಶ ಜಾರಿ

ಕುಂದಾಪುರ: ರಾಜ್ಯದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬಲ ನೀಡುವ ಉದ್ದೇಶದಿಂದ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಬೇಕೆಂಬ ಮಹತ್ವದ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಇದುವರೆಗೂ 1ರಿಂದ 10ನೇ ತರಗತಿವರೆಗೆ ಸೀಮಿತವಾಗಿದ್ದ ಈ ಸೌಲಭ್ಯವನ್ನು ಇದೀಗ ಕಿರಿಯ ಮಕ್ಕಳಿಗೂ ವಿಸ್ತರಿಸಲಾಗಿದೆ.

ಡಿ.1ರಿಂದಲೇ ಈ ಆದೇಶ ಜಾರಿಯಲ್ಲಿ ಇದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ 6.78 ರೂ. ವೆಚ್ಚ ನಿಗದಿಪಡಿಸಲಾಗಿದೆ. ಇದರಲ್ಲಿ 4.07 ರೂ. ಕೇಂದ್ರದಿಂದ ಮತ್ತು 2.71 ರೂ. ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ವಾರಕ್ಕೆ ನಾಲ್ಕು ದಿನ ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ಅಜೀಂ ಪ್ರೇಮ್‌ಜಿ ಫೌಂಡೇಶನ್ ಒದಗಿಸಲಿದ್ದು, ಉಳಿದ ದಿನಗಳಿಗೆ ರಾಜ್ಯ ಸರ್ಕಾರವೇ ಪೂರೈಕೆ ಮಾಡಲಿದೆ.

ಕಳೆದ ವರ್ಷ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿ ತರಗತಿಗಳು ಆರಂಭವಾದರೂ ಮಧ್ಯಾಹ್ನದ ಊಟ ಯೋಜನೆ ಅವರನ್ನು ಒಳಗೊಂಡಿರಲಿಲ್ಲ. ಶಾಲೆಗಳು ಹಿರಿಯ ಮಕ್ಕಳ ಆಹಾರದಿಂದ ಕೆಲವು ಭಾಗವನ್ನು ಕಿರಿಯರಿಗೆ ಹಂಚುವ ಮೂಲಕ ತಾತ್ಕಾಲಿಕ ಪರಿಹಾರ ಮಾಡುತ್ತಾ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯವು ಕೇಂದ್ರಕ್ಕೆ ಪತ್ರ ಬರೆದು ಈ ವರ್ಷದಿಂದಲೇ ಊಟದ ಸೌಲಭ್ಯ ವಿಸ್ತರಣೆಗಾಗಿ ವಿನಂತಿಸಿತ್ತು.

ಈ ಯೋಜನೆಗಾಗಿ ಸರ್ಕಾರ 755.62 ಕೋಟಿ ರೂ. ಹಣ ಮೀಸಲಿಟ್ಟಿದ್ದು, ರಾಜ್ಯದ ಸರಕಾರಿ ಶಾಲೆಗಳಲ್ಲಿ 40,47,461 ಮತ್ತು ಅನುದಾನಿತ ಸಂಸ್ಥೆಗಳಲ್ಲಿ 11,13,929 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 51,61,390 ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.

ದ್ವಿಭಾಷಾ ಶಿಕ್ಷಣ ಮತ್ತು ಇಂಗ್ಲಿಷ್‌ ಮಾಧ್ಯಮ ಪ್ರಾರಂಭಕ್ಕೂ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಈಗಾಗಲೇ 4,134 ಹೊಸ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಇಂಗ್ಲಿಷ್‌ ಮಾಧ್ಯಮ ಆರಂಭವಾಗಿದ್ದು, ಈ ಕ್ರಮಕ್ಕಾಗಿ 70 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಸರಕಾರಿ ಶಾಲೆಗಳ ದಾಖಲಾತಿ ಹಾಗೂ ಮಕ್ಕಳ ಪೌಷ್ಠಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹೊಸ ಆದೇಶ ಮಹತ್ವದ್ದಾಗಿದೆ ಎಂದು ಕುಂದಾಪುರ ಬಿಇಒ ಶೋಭಾ ಶೆಟ್ಟಿ ತಿಳಿಸಿದ್ದಾರೆ.

Related posts