ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪುನರ್ಜೀವ: ವಾಷಿಂಗ್ ಯುನಿಟ್‌ಗಳ ಬಂದ್ ಆದೇಶ ಹಿಂಪಡೆಯಲು ಸಿಎಂ ಸೂಚನೆ
ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪುನರ್ಜೀವ: ವಾಷಿಂಗ್ ಯುನಿಟ್‌ಗಳ ಬಂದ್ ಆದೇಶ ಹಿಂಪಡೆಯಲು ಸಿಎಂ ಸೂಚನೆ
ಬಳ್ಳಾರಿ ಜೀನ್ಸ್ ಉದ್ಯಮ ಎದುರಿಸುತ್ತಿದ್ದ ಮಹತ್ತರ ಸಂಕಷ್ಟಕ್ಕೆ ರಾಜ್ಯ ಸರ್ಕಾರದಿಂದ ದೊಡ್ಡ ಪರಿಹಾರ ದೊರಕಿದೆ. ಪರಿಸರ ಮಾಲಿನ್ಯಕ್ಕೆ ಕಾರಣವೆಂದು 36 ವಾಷಿಂಗ್ ಯುನಿಟ್‌ಗಳಿಗೆ ನೀಡಿದ್ದ ಬಂದ್ ನೋಟಿಸ್ ಉದ್ಯಮಿಗಳನ್ನು ಆತಂಕಕ್ಕೀಡಾಗಿಸುತ್ತಿದ್ದ ಸಂದರ್ಭದಲ್ಲಿ, ರಾಜ್ಯ ಸರ್ಕಾರದಿಂದ ಕಾಮನ್ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್ (CETP) ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಇದರಿಂದ ವಾಷಿಂಗ್ ಯುನಿಟ್‌ಗಳ ಬಂದ್ ಭೀತಿ ನಿವಾರಣೆಯಾಗಿದ್ದು, ಉದ್ಯಮದ ಭವಿಷ್ಯಕ್ಕೆ ಹೊಸ ದಾರಿಯು ತೆರೆದಿದೆ.
22 ಕೋಟಿ ರೂ. ವೆಚ್ಚದಲ್ಲಿ CETP ನಿರ್ಮಾಣಕ್ಕೆ ಅನುಮೋದನೆ. ನಾಲ್ಕು ಎಕರೆ ಜಾಗದಲ್ಲಿ ಪ್ಲಾಂಟ್ ಸ್ಥಾಪನೆ. 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ಭದ್ರತೆ. ಜೀನ್ಸ್ ಉದ್ಯಮಿಗಳ ಹಲವು ವರ್ಷಗಳ ಬೇಡಿಕೆ ಈಡೇರಿಕೆ.
ಬಳ್ಳಾರಿಯಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಸಿದ್ಧ ಉಡುಪು ತಯಾರಿಕಾ ಘಟಕಗಳಿದ್ದು, 10 ಸಾವಿರಕ್ಕೂ ಹೆಚ್ಚು ಜನರು ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಹೊಂದಿದ್ದಾರೆ. ವಾಷಿಂಗ್ ಯುನಿಟ್‌ಗಳ ಬಂದ್ ನೋಟಿಸ್‌ನಿಂದ ಕೈಗಾರಿಕೆ ನಿಲ್ಲುವ ಪರಿಸ್ಥಿತಿ ಉಂಟಾಗಿದ್ದರೂ, CETP ನಿರ್ಮಾಣ ನಿರ್ಧಾರವು ಈ ಭೀತಿಯನ್ನು ದೂರ ಮಾಡಿದೆ.
2010ರಲ್ಲಿ ಕೈಗಾರಿಕಾ ಪ್ರದೇಶದ 4ನೇ ಹಂತದಲ್ಲಿ CETPಗಾಗಿ ನಾಲ್ಕು ಎಕರೆ ಜಾಗ ಮೀಸಲು ಮಾಡಿದರೂ, ಅನುದಾನ ಕೊರತೆಯಿಂದ ಯೋಜನೆ ವರ್ಷಗಳ ಕಾಲ ಮುಂದೂಡಲ್ಪಟ್ಟಿತ್ತು. 2022ರಲ್ಲಿ ಉದ್ಯಮಿಗಳು 24 ಕೋಟಿ ರೂ. ವೆಚ್ಚದ DPR ಸಲ್ಲಿಸಿದ್ದರೂ ಪ್ರಗತಿ ಕಾಣಲಿಲ್ಲ. ಇದೀಗ, ಕೆಎಐಡಿಬಿಯಿಂದ 11 ಕೋಟಿ ಹಾಗೂ ಕೆಕೆಆರ್‌ಡಿಬಿಯಿಂದ 11 ಕೋಟಿ, ಒಟ್ಟು 22 ಕೋಟಿ ರೂ.ಯನ್ನು ಸರ್ಕಾರ ಮಂಜೂರು ಮಾಡಿದೆ.
ವಾಷಿಂಗ್ ಯುನಿಟ್‌ಗಳಲ್ಲಿ ನಿರ್ಮಾಣವಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸುವ ETP ಸ್ಥಾಪಿಸಲು ಹೆಚ್ಚಿನ ವೆಚ್ಚವಾಗುತ್ತಿದ್ದರಿಂದ, ಎಲ್ಲ ಯುನಿಟ್‌ಗಳಿಗೆ ಸಾಮೂಹಿಕವಾಗಿ ಸೇವೆ ನೀಡುವ CETP ಅಗತ್ಯವಿತ್ತು. CETP ಮೂಲಕ ತ್ಯಾಜ್ಯ ನೀರಿನ ಸಂಸ್ಕರಣೆ, ಮರುಬಳಕೆ ಹಾಗೂ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ. ಜೊತೆಗೆ ನೀರಿನ ಕೊರತೆ ನಿವಾರಣೆಗೆ ಸಹ ಇದು ನೆರವಾಗಲಿದೆ.
ಸಿಇಟಿಪಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು 6 ತಿಂಗಳಿಂದ ಒಂದು ವರ್ಷದವರೆಗೆ ಅವಧಿ ಬೇಕಾಗಬಹುದು. ಅನುದಾನ ಬಿಡುಗಡೆ, ತಾಂತ್ರಿಕ ಅನುಮೋದನೆ, ಸ್ಥಳ ಪರಿಶೀಲನೆ, DPR ಪುನರ್ ತಯಾರಿ, ಟೆಂಡರ್ ಪ್ರಕ್ರಿಯೆ ಸೇರಿದಂತೆ ಕ್ರಮಬದ್ಧ ಹಂತಗಳು ಮುಗಿದ ಬಳಿಕ ನಿರ್ಮಾಣ ಆರಂಭವಾಗಲಿದೆ.
ರಾಜ್ಯದ ಈ ಮಹತ್ವದ ನಿರ್ಧಾರ ಬಳ್ಳಾರಿ ಜೀನ್ಸ್ ಉದ್ಯಮವನ್ನು ನಿಧಾನವಾಗಿ ಪುನರ್ಜೀವಗೊಳಿಸಲಿದೆ ಎಂದು ಉದ್ಯಮಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

