ಹಾವೇರಿ: ‘ಅನ್ನ ಸುವಿಧಾ’ ಯೋಜನೆಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ – ಮನೆ ಬಾಗಿಲಿಗೇ ಪಡಿತರ ಸೇವೆ
ಹಾವೇರಿ: ‘ಅನ್ನ ಸುವಿಧಾ’ ಯೋಜನೆಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ – ಮನೆ ಬಾಗಿಲಿಗೇ ಪಡಿತರ ಸೇವೆ
ಹಾವೇರಿ ಜಿಲ್ಲೆಯಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿರುವ ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬಗಳಿಗೆ ಸರ್ಕಾರ ಜಾರಿಗೊಳಿಸಿರುವ ‘ಅನ್ನ ಸುವಿಧಾ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಜಿಲ್ಲೆಯಲ್ಲಿ ಒಟ್ಟು 7 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ 400ಕ್ಕೂ ಹೆಚ್ಚು ವಯೋವೃದ್ಧರು ಮನೆ ಬಾಗಿಲಿಗೆ ಪಡಿತರ ವಿತರಣೆಗಾಗಿ ಒಪ್ಪಿಗೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 7,211 ಫಲಾನುಭವಿಗಳ ಗುರುತು. 75 ವರ್ಷ ಮೇಲ್ಪಟ್ಟ ವೃದ್ಧರು ಮಾತ್ರ ಇರುವ ಮನೆಗಳಿಗೆ ಪಡಿತರ ಅಂಗಡಿಕಾರರು ನೇರವಾಗಿ ತೆರಳಿ ಪಡಿತರ ವಿತರಣೆ. ಜಿಲ್ಲೆಯ 447ಕ್ಕೂ ಹೆಚ್ಚು ಫಲಾನುಭವಿಗಳಿಂದ ಮೊದಲ ತಿಂಗಳಲ್ಲೇ ಒಪ್ಪಿಗೆ ಪತ್ರ ಸಂಗ್ರಹ. ಅಂಗಡಿಕಾರರಿಗೆ ಪ್ರತಿ ಮನೆಯಲ್ಲಿ ಪಡಿತರ ನೀಡಿದಕ್ಕಾಗಿ ಹೆಚ್ಚುವರಿ 50 ರೂ. ಕಮಿಷನ್
ಯೋಜನೆಗೆ ಸಾರ್ವಜನಿಕ ಸ್ಪಂದನೆ..
ವಯೋವೃದ್ಧರು ದೂರದ ಪಡಿತರ ಅಂಗಡಿಗೆ ತೆರಳಿ ಗಂಟೆಗಟ್ಟಲೆ ನಿರೀಕ್ಷಿಸಿ ಪಡಿತರ ಪಡೆಯುವುದು ಕಷ್ಟಸಾಧ್ಯವಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ, ಸಂಚಾರದ ಸೌಲಭ್ಯಗಳ ಕೊರತೆ ಇತ್ಯಾದಿ ಕಾರಣಗಳಿಂದ ಹಿರಿಯ ನಾಗರಿಕರ ಸಂಕಷ್ಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ‘ಅನ್ನ ಸುವಿಧಾ’ ಯೋಜನೆ ಘೋಷಿಸಿ, ವಯೋವೃದ್ಧರ ಮನೆಗಳಲ್ಲೇ ಪಡಿತರ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ.
ರಾಜ್ಯಮಟ್ಟದಲ್ಲಿ 2.58 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಯೋಜನೆ ಜಾರಿಗೆ 15.48 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಅಕ್ಟೋಬರ್ ತಿಂಗಳಿಂದ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ.
ಯೋಜನೆಯ ಪ್ರಕ್ರಿಯಾ ವಿಧಾನ
ಪ್ರತೀ ತಿಂಗಳ 1ರಿಂದ 5ರ ಒಳಗೆ ಫಲಾನುಭವಿಗಳಿಂದ ಒಪ್ಪಿಗೆ ಪತ್ರ ಸಂಗ್ರಹಣೆ. 6ರಿಂದ 15ರ ಒಳಗೆ ಪಡಿತರ ವಿತರಣೆ. ಪಡಿತರ ಅಂಗಡಿಕಾರರಿಗೆ ಸಾಮಾನ್ಯ ಕಮಿಷನ್ ಜೊತೆಗೆ ಪ್ರತಿ ಮನೆಗೆ 50 ರೂ. ಹೆಚ್ಚುವರಿ ಪಾವತಿ
ಹಾವೇರಿಯಲ್ಲಿ 7,211 ಫಲಾನುಭವಿಗಳಿದ್ದು, 447 ಮಂದಿ ಈಗಾಗಲೇ ಯೋಜನೆಯನ್ನು ಬಳಸಲು ಒಪ್ಪಿಗೆ ನೀಡಿದ್ದಾರೆ. ರೇಷನ್ ದೊರಕಿರುವ ಅಂಗಡಿಕಾರರು ಶನಿವಾರದಿಂದಲೇ ಮನೆ-ಮನೆಗೆ ತೆರಳಿ ಪಡಿತರ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿಕಾರರ ಕಳವಳ….
ಒಪ್ಪಿಗೆ ಪತ್ರ ವಸೂಲಿಕೆ ತಿಂಗಳುತಿಂಗಳು ಪುನರಾವರ್ತನೆಯಾಗುತ್ತಿರುವುದರಿಂದ ಅಂಗಡಿಕಾರರಿಗೆ ಹೆಚ್ಚು ಸಮಯ ಮತ್ತು ಶ್ರಮ ಬೇಕಾಗುತ್ತಿದೆ. ಫಲಾನುಭವಿಗಳು ಮನೆಯಲ್ಲಿ ಇಲ್ಲದಿದ್ದರೆ ಒಂದೇ ಮನೆಗೆ ಹಲವು ಬಾರಿ ತೆರಳಬೇಕಾಗುವ ಸ್ಥಿತಿ ಉಂಟಾಗಿದೆ. ಇದರಿಂದ ‘ಒಪ್ಪಿಗೆ ಪತ್ರ’ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸಬೇಕು ಎಂಬ ಬೇಡಿಕೆ ಅಂಗಡಿಕಾರರಿಂದ ಕೇಳಿಬರುತ್ತಿದೆ.
ತಾಲ್ಲೂಕು ಫಲಾನುಭವಿಗಳು
ಬ್ಯಾಡಗಿ 681
ಹಾನಗಲ್ 1268
ಹಾವೇರಿ 1429
ಹಿರೇಕೆರೂರು 668
ರಾಣೇಬೆನ್ನೂರ 1144
ಸವಣೂರು 674
ಶಿಗ್ಗಾವಿ 800
ರಟ್ಟಿಹಳ್ಳಿ 547
ಒಟ್ಟು 7211
“ಜಿಲ್ಲೆಯಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಇರುವ ಕುಟುಂಬಗಳು ಈ ಯೋಜನೆಯಡಿ ಪಡಿತರವನ್ನು ಮನೆ ಬಾಗಿಲಿಗೇ ಪಡೆಯಲಿದ್ದಾರೆ. ಎಲ್ಲರೂ ಇದರ ಲಾಭ ಪಡೆದುಕೊಳ್ಳಬೇಕು,” ಎಂದು ಹಾವೇರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಡಿ.ಜೆ. ತಿಳಿಸಿದ್ದಾರೆ.

