ಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ
ಚಿಕ್ಕಬಳ್ಳಾಪುರ – ಪ್ರೇಮಿಗಳಿಗೆ ದಾಂಪತ್ಯ ಬದುಕಿನ ಹೊಸ ಆರಂಭ: ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ವಿವಾಹ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪೋಷಕರ ವಿರೋಧದ ನಡುವೆಯೇ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿರಿಸಿರುವ ಘಟನೆ ಗಮನ ಸೆಳೆದಿದೆ.
ನಗರದ ಸಿದ್ದಾರ್ಥ ಬಡವಾಣೆಯ ನಿವಾಸಿಗಳಾದ ಗಣೇಶ್ (25) ಮತ್ತು ಅಕ್ಷಯಾ (19) ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರೂ, ಕುಟುಂಬದ ಒಪ್ಪಿಗೆ ಇಲ್ಲದೆ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು.
ಅಕ್ಷಯಾಳ ಪೋಷಕರು ಅವಳಿಗೆ ಸೋದರಮಾವನೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರೂ, ಆ ಸಂಬಂಧ ಅವಳಿಗೆ ಇಷ್ಟವಿರಲಿಲ್ಲ. ಪ್ರೀತಿಸಿದವನೊಂದಿಗೆ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಯುವತಿ ಮನೆ ಬಿಟ್ಟು ಗಣೇಶ್ ಜೊತೆ ಓಡಿಹೋಗಿ ಧರ್ಮಸ್ಥಳದಲ್ಲಿ ಮದುವೆಯಾದಳು.
ಮಗಳು ಕಾಣೆಯಾಗಿರುವ ಕುರಿತು ಆತಂಕಗೊಂಡ ಕುಟುಂಬದವರು ಶಿಡ್ಲಘಟ್ಟ ನಗರ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದರು. ತನಿಖೆಯ ಅಂಗವಾಗಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆತರಿದರು.
ಸಮಚಾರ ವಿಚಾರಿಸಿದ ನಂತರ, ಇಬ್ಬರೂ ಪರಸ್ಪರರೊಂದಿಗೇ ಬದುಕಲು ಸ್ಪಷ್ಟ ಒಪ್ಪಿಗೆ ನೀಡಿದ್ದು, ಪೊಲೀಸರ ಮುಂದಾಳತ್ವದಲ್ಲಿ ಮದುವೆಯನ್ನು ಕಾನೂನುಬದ್ಧವಾಗಿ ಮುಕ್ತಾಯಗೊಳಿಸಲಾಯಿತು.
ಪಿಎಸ್ಐ ವೇಣುಗೋಪಾಲ್ ಅವರ ಮಾರ್ಗದರ್ಶನದಲ್ಲಿ, ಠಾಣೆಯಲ್ಲೇ ಪ್ರೇಮಿ ಜೋಡಿಯ ಕೈಗೆ ಕೈ ಹಾಕಿಸಿ, ಹಾರ ವಿನಿಮಯ ಮಾಡಿಸಿ ವೈವಾಹಿಕ ಜೀವನಕ್ಕೆ ಶುಭಾಶಯ ಕೋರಲಾಯಿತು.
ಈ ಘಟನೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ನಡೆದ ವಿಶಿಷ್ಟ ಮದುವೆಯಾಗಿ ಸ್ಥಳೀಯರಲ್ಲಿ ಕುತೂಹಲ ಹುಟ್ಟಿಸಿದೆ.

