ಕ್ರೈಂ ಸುದ್ದಿ 

ಬೈಲಹೊಂಗಲ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ಮೂವರು ಪ್ರಯಾಣಿಕರಿಗೆ ಗಾಯ/ ದೊಡವಾಡ-ಬೆಳವಡಿ ಮಾರ್ಗ ಮಧ್ಯೆ ಘಟನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಬೈಲಹೊಂಗಲದಿಂದ ದೊಡವಾಡ-ನನಗುಂಡಿಕೊಪ್ಪ ಗ್ರಾಮಗಳಿಗೆ ತೆರಳುತ್ತಿದ್ದ ಬೈಲಹೊಂಗಲ ಸಾರಿಗೆ ಘಟಕದ ಬಸ್ ಗುರುವಾರ ಬೆಳಗ್ಗೆ ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿ ದೊಡವಾಡ ಗ್ರಾಮದ ತರಗಾರ ಗಚ್ಚಿನ ಬಳಿ ಹಾದು ಹೋಗಿರುವ ಮುಖ್ಯ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಹಾಗೂ ಕೇವಲ ಮೂರು ಜನ ಸಾರ್ವಜನಿಕ ಪ್ರಯಾಣಿಕರು ಮಾತಯ್ರ ಸಂಚರಿಸುತ್ತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ. ದೊಡವಾಡ ಗ್ರಾಮದ ವೆಂಕಪ್ಪ ಯರಿಕಿತ್ತೂರ, ಮಲ್ಲಪ್ಪ ಯರಿಕಿತ್ತೂರ, ಹಾಗೂ ಮಂಜುನಾಥ ಯರಿಕಿತ್ತೂರ ಬಸ್ ಡಿಕ್ಕಿ ರಭಸಕ್ಕೆ ಗಾಯಗೊಂಡಿದ್ದಾರೆ. ವೆಂಕಪ್ಪ ಯರಿಕಿತ್ತೂರವರಿಗೆ ಭುಜ ಮತ್ತು ಕೈಗೆ ತೀವೃ ಸ್ವರೂಪದ ಪೆಟ್ಟಾಗಿದ್ದು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆ ಪ್ರಯಾಣಿಕರಿದ್ದರೆ ಮತ್ತಷ್ಟು ಜನ ಗಾಯಗೊಳ್ಳುತ್ತಿದ್ದರು ಎಂದು ಮಲ್ಲಪ್ಪ ಯರಿಕಿತ್ತೂರ ಹೇಳಿದ್ದಾರೆ.
ಬೈಲಹೊಂಗಲ ಸಾರಿಗೆ ಘಟಕದ ದುರಸ್ತಿ ವಿಭಾಗದ ಮೆಕಾನಿಕ್ ಹಾಗೂ ಚಾರ್ಜಮನ್‍ಗೆ ಬೆಳಗ್ಗೆ ಘಟಕದಿಂದ ಬಸ್ ತರುವಾಗಲೆ ಬ್ರೇಕ್ ವಿಫಲತೆ ಸರಿ ಮಾಡಿಕೊಡಬೇಕೆಂದು ತಿಳಿಸಿದರು ಕೂಡ ಒಂದು ಟ್ರಿಪ್ ಹೋಗಿ ಬನ್ನಿ ನಂತರ ಮಾಡುತ್ತೇವೆ ಎಂದು ಬೇಜವಾಬ್ದಾರಿಯಿಂದ ಹೇಳಿದರು. ಅನಿವಾರ್ಯವಾಗಿ ಅದೇ ಬಸ್ ತೆಗೆದುಕೊಂಡು ಬರಬೇಕಾದರೆ ರಸ್ತೆ ಮಧ್ಯೆ ದಿಢೀರ್ ಬ್ರೇಕ್ ಫೇಲ್ ಆಗಿ ನಿಯಂತ್ರಣಕ್ಕೆ ಸಿಗದೆ ಎದುರಿಗೆ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದ ಹೊಲದ ಗಿಡಕ್ಕೆ ಬಸ್ ಡಿಕ್ಕಿ ಹೊಡೆಸಬೇಕಾಯಿತು ಎಂದು ಬಸ್ ಚಾಲಕ ಮಡಿವಾಳಯ್ಯ ಹಿರೇಮಠ ಬೈಲಹೊಂಗಲ ಸಾರಿಗೆ ಘಟಕದ ದುರಸ್ತಿ ವಿಭಾಗದವರ ಮೇಲೆ ಆರೋಪ ಮಾಡಿದ್ದಾರೆ. ದೊಡವಾಡ ಠಾಣೆ ಪಿಎಸ್‍ಐ ಗಜಾನನ ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ : ಸಿದ್ದಪ್ಪ ಕಂಬಾರ ತಾಲೂಕ ನ್ಯೂಸ್ ಬೈಲಹೊಂಗಲ

Related posts

Leave a Comment