ಸುದ್ದಿ 

ಅವಕಾಶಗಳನ್ನು ವಿಭಿನ್ನವಾಗಿ ಬಳಸಿಕೊಳ್ಳುವುದರಿಂದ ಯಶಸ್ಸು: ಕರ್ನಲ್ (ಪ್ರೊ) ವೈ. ಎಸ್. ಸಿದ್ದೇಗೌಡ

Taluknewsmedia.com

ತುಮಕೂರು: ನಮಗೆ ಸಿಗುವ ಅವಕಾಗಳನ್ನು ಎಷ್ಟು ವಿಭಿನ್ನವಾಗಿ, ಸೃಜನಶೀಲವಾಗಿ ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಚತುರತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತುಮಕೂರು ವಿವಿ ಕುಲಪತಿ ಕರ್ನಲ್ (ಪ್ರೊ) ವೈ. ಎಸ್. ಸಿದ್ದೇಗೌಡ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರ, ಮಾಹಿತಿ ವ್ಯವಸ್ಥೆ, ಎಂಬಿಎ ಹಾಗೂ ಅರ್ಥಶಾಸ್ತ್ರ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ‘ಡೈನಮಿಕ್ಸ್ ಆಫ್ ಇನ್ವೇಷನ್ ಅಂಡ್ ಕ್ರಿಯೇಟಿವಿಟಿ ಇನ್ ದ ಗ್ಲೋಬಲ್ ಸಿನೇರಿಯೊ’ ಎಂಬ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನದ ಸದ್ಬಳಕೆ, ಆವಿಷ್ಕಾರ ಮತ್ತು ಉತ್ಕೃಷ್ಟವಾದ ಗುಣಮಟ್ಟವನ್ನು ಕಾಯ್ದು ಕೊಳ್ಳುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಅನುಷ್ಠಾನ ಗೊಂಡಿರುವ ರಾಷ್ಟ್ರೀಯ ಶಿಕ್ಷಣನೀತಿಯು ಇದೇ ಉದ್ದೇಶವನ್ನು ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿ ಮೌಲ್ಯಯುತ ಶಿಕ್ಷಣವನ್ನು ಒದಗಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಅಮೇರಿಕಾದ ಗ್ಲೋಬಲ್ ಡಿಜಿಟಲ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಹರಿಕೃಷ್ಣ ಮಾರನ್, ಪ್ರಾಚೀನ ಕಾಲದಿಂದಲೂ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ವಿಶ್ವದ ಮೂಲೆ ಮೂಲೆ ಗಳಿಂದ ಬರುವ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ತಾಣಗಳಾಗಿದ್ದವು. ಭಾರತೀಯರು ವಿಶ್ವದ ಪ್ರತಿಷ್ಠಿತ ಕಂಪನಿಗಳಾದ ಗೂಗಲ್, ಟ್ವಿಟರ್, ಮೈಕ್ರೋಸಾಫ್ಟ್ ಸೇರಿದಂತೆ ಇನ್ನಿತರ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ಭಾರತದ ಇತರ ರಾಷ್ಟ್ರಗಳಿಗೆ ವಿಶ್ವಗುರು ಎನಿಸಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಪ್ರೀತಿ ಅಧವ್, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆಗಾಗಿ ಬಳಸಿ ಕಾಲ ಹರಣ ಮಾಡದೇ, ಸ್ವ ಉದ್ಯಮಗಳ ಬೆಳವಣಿಗೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿ ಕೊಳ್ಳಬಹುದು. ವಿದ್ಯಾರ್ಥಿಗಳು ತಮಗೆ ಲಭ್ಯವಿರುವ ಸೌಲಭ್ಯಗಳನ್ನು ಸರಿಯಾಗಿ ಬಳಸುವ ಮೂಲಕ ಜೀವದಲ್ಲಿ ಪ್ರಗತಿ ಹೊಂದಬಹುದು ಎಂದರು.
ಕಾರ್ಯಕ್ರಮದಲ್ಲಿ ವಿ.ವಿ. ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು, ಆನ್‌ಲೈನ್ ಮೂಲಕವಾಗಿ ಮಲೇಶಿಯಾ ಮಲ್ಟಿಮೀಡಿಯ ವಿಶ್ವವಿದ್ಯಾನಿಲಯದ ರಾಬರ್ಟ ಜೆಯಕುಮಾರ್, ಈಜಿಪ್ಟನ ಡಾ. ಅಲಾ ಸ್ಯಾಮಿ ಅಫೀಸ್ ಮೆಘಹೆದ್, ಆಸ್ಟ್ರೇಲಿಯಾದ ಡಾ. ಗವಂಬಡಿ ಭಾಗವಹಿಸಿದ್ದರು. ವೆಬಿನಾರ್ ನಿರ್ದೇಶಕ ಪ್ರೊ. ಪಿ. ಪರಮಶಿವಯ್ಯ, ಸಂಘಟನಾ ಕಾರ್ಯದರ್ಶಿ ಡಾ. ನೀಲಕಂಠ ಎನ್. ಟಿ. ಉಪಸ್ಥಿತರಿದ್ದರು.

Related posts

Leave a Comment