ರಾಜಕೀಯ ಸುದ್ದಿ 

ಕರ್ನಾಟಕ ವಿಧಾನಸಭಾ ಅಧಿವೇಶನ ಆರಂಭವಾದ ಮೊದಲನೇ ದಿನವೇ ವಿಪಕ್ಷದವರು ಸರ್ಕಾರದ ಮೇಲೆ “ಕೆಲಸ ಮಾಡುತ್ತಿಲ್ಲ,

Taluknewsmedia.com

ಕರ್ನಾಟಕ ವಿಧಾನಸಭಾ ಅಧಿವೇಶನ ಆರಂಭವಾದ ಮೊದಲನೇ ದಿನವೇ ವಿಪಕ್ಷದವರು ಸರ್ಕಾರದ ಮೇಲೆ “ಕೆಲಸ ಮಾಡುತ್ತಿಲ್ಲ, ಖಜಾನೆಯಲ್ಲಿ ಹಣವಿಲ್ಲ, ಎಲ್ಲವೂ ಖಾಲಿಯಾಗಿದೆ” ಎನ್ನುವ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ, ವಿರೋಧ ಪಕ್ಷದ ಹೇಳಿಕೆಗಳನ್ನು “ಬೇಜವಾಬ್ದಾರಿ” ಎಂದು ಖಂಡಿಸಿದ್ದಾರೆ.

ದೇಶಪಾಂಡೆ ಹೇಳಿದರು:
“ಇಂದು ಅಧಿವೇಶನದ ಮೊದಲ ದಿನ. ನಮ್ಮೊಂದಿಗೆ ಸೇವೆ ಸಲ್ಲಿಸಿ ಅಗಲಿದ ಮಾಜಿ ಶಾಸಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ದಿನ. ಅಂತಹ ಸಮಯದಲ್ಲಿ ಒಳಗೆ–ಹೊರಗೆ ಸರ್ಕಾರದ ಬಗ್ಗೆ ತೀವ್ರ ಹಾಗೂ ತತ್ವವಿಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ಐದು ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಮಾತಿನಂತೆ ಜಾರಿ ಮಾಡುತ್ತಿದ್ದಾರೆ. ಈಗಾಗಲೇ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಅದಲ್ಲದೆ ಬಡ ಕುಟುಂಬಗಳು, ವಿಧವೆಯರು, ಹಿರಿಯ ನಾಗರಿಕರಿಗೆ ಪಿಂಚಣಿ ಸೇರಿದಂತೆ ಹಲವಾರು ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅಭಿವೃದ್ಧಿ ಕಾರ್ಯಗಳೂ ನಿರಂತರವಾಗಿ ಸಾಗುತ್ತಿವೆ.”

ಅವರು ಮುಂದುವರಿಸಿದರು:
“ಪ್ರತಿ ಶಾಸಕರಿಗೂ ಅನುದಾನ ನೀಡಲಾಗಿದೆ. ಕಾಂಗ್ರೆಸ್ ಶಾಸಕರಿಗೆ ಸ್ವಲ್ಪ ಹೆಚ್ಚು, ಬಿಜೆಪಿ ಶಾಸಕರಿಗೆ ಸ್ವಲ್ಪ ಕಡಿಮೆ ಸಿಕ್ಕಿರಬಹುದು — ಅದನ್ನು ನಾನು ಒಪ್ಪುತ್ತೇನೆ. ಆದರೆ ಏನೇ ಅನುದಾನ ನೀಡಿದರೂ, ಅದರ ಬಳಕೆ ಕ್ಷೇತ್ರದ ಅಭಿವೃದ್ಧಿಗೆ ಆಗುತ್ತಿದೆಯೇ ಎಂಬುದನ್ನು ಯೋಚಿಸಬೇಕು. ಅನುದಾನ ತೆಗೆದುಕೊಂಡು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದೇ ಮುಖ್ಯ. ಸರ್ಕಾರ ಆರ್ಥಿಕವಾಗಿ ಶಕ್ತಿಯುತವಾಗಿದೆ. ಸಿದ್ದರಾಮಯ್ಯವರ ನಾಯಕತ್ವದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ.”

ಮುಖ್ಯಮಂತ್ರಿ–ಉಪಮುಖ್ಯಮಂತ್ರಿ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ದೇಶಪಾಂಡೆ ಸ್ಪಷ್ಟನೆ ನೀಡಿ ಹೇಳಿದರು:
“ಯಾವುದೇ ಬಿಕ್ಕಟ್ಟೇ ಇಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಪರಸ್ಪರ ಗೌರವದಿಂದ ವರ್ತಿಸುತ್ತಿದ್ದಾರೆ. ಒಬ್ಬರ ಮನೆಗೆ ಒಬ್ಬರು ಹೋಗುತ್ತಾರೆ, ಒಟ್ಟಿಗೆ ಊಟ ಮಾಡುತ್ತಾರೆ. ಡಿ.ಕೆ. ಶಿವಕುಮಾರ್ ಒಬ್ಬ ಶ್ರ್ರಮಶೀಲ ನೇತೃತ್ವ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷದಲ್ಲೂ ಯಾವುದೇ ಅಶಾಂತಿ ಇಲ್ಲ. ಪಕ್ಷ ಶಕ್ತಿಶಾಲಿಯಾಗಲು ಎಲ್ಲರೂ ಶ್ರಮಿಸುತ್ತಿದ್ದಾರೆ.”

ಸಿ.ಎಂ. ಸ್ಥಾನ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ತೀವ್ರ ಪ್ರತಿಕ್ರಿಯೆ ನೀಡಿ ಹೇಳಿದರು:
“ಆ ವಿಷಯ ಈಗ ಚರ್ಚೆಗೆ ಬಂದಿಲ್ಲ, ಬರುವುದಿಲ್ಲ. ಈಗ ಮುಖ್ಯ ಚರ್ಚೆಯಿರಬೇಕಾದದ್ದು ಅನುದಾನ, ಅಭಿವೃದ್ಧಿ ಮತ್ತು ಜನಪ್ರಶ್ನೆಗಳು. ಸಿಎಂ ಬದಲಾವಣೆ ಬಗ್ಗೆ ಮಾತಾಡುವುದು ಅನಗತ್ಯ.”

ಕೊನೆಗೆ ದೇಶಪಾಂಡೆ ಹೇಳಿದರು:
“ಕಾಂಗ್ರೆಸ್ ಪಕ್ಷದ ಭವಿಷ್ಯ ಉಜ್ವಲ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಪಕ್ಷ ಇನ್ನಷ್ಟು ಬಲವಾಗುತ್ತಿದೆ. ನಾವು ಜನರ ಸೇವೆಗೆ ಬದ್ಧವಾಗಿದ್ದೇವೆ.”

Related posts