“ಸ್ವಸ್ಥ ಮೈಸೂರು” ಅಭಿಯಾನಕ್ಕೆ ಅಧಿಕೃತ ಚಾಲನೆ — ಆರೋಗ್ಯ ಇಲಾಖೆ ಒಪ್ಪಂದಕ್ಕೆ ಸಹಿ
“ಸ್ವಸ್ಥ ಮೈಸೂರು” ಅಭಿಯಾನಕ್ಕೆ ಅಧಿಕೃತ ಚಾಲನೆ — ಆರೋಗ್ಯ ಇಲಾಖೆ ಒಪ್ಪಂದಕ್ಕೆ ಸಹಿ
ಮೈಸೂರು: ನಗರದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವುದು ಹಾಗೂ ಜನರಲ್ಲಿ ಆರೋಗ್ಯ ಜಾಗೃತಿ ಹೆಚ್ಚಿಸುವ ಉದ್ದೇಶದೊಂದಿಗೆ “ಸ್ವಸ್ಥ ಮೈಸೂರು” ಅಭಿಯಾನಕ್ಕೆ ಶುಕ್ರವಾರ ಅಧಿಕೃತ ಆರಂಭ ದೊರೆತಿದೆ. ಎಚ್.ಎಚ್. ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ಹಾಗೂ ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಜೊತೆಗೂಡಿ ಆರೋಗ್ಯ ಇಲಾಖೆ ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಸಚಿವ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿ, “ಆರೋಗ್ಯ ವರ್ಲ್ಡ್ ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿ ನಡೆಸಿದ ಅಭಿಯಾನದ ಮುಂದುವರಿಕೆಯಾಗಿ ಮೈಸೂರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಚಾರ. ನಮ್ಮ ಇಲಾಖೆಯು ಈ ಕಾರ್ಯವನ್ನು ಮತ್ತಷ್ಟು ಬಲಪಡಿಸಲು ಸಹಕಾರ ನೀಡಲು ಸಿದ್ಧವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಮೈಸೂರಿಗರ ಆರೋಗ್ಯ ಮಟ್ಟವನ್ನು ಸುಧಾರಿಸುವ ಗುರಿ ಈ ಅಭಿಯಾನ ಹೊಂದಿದೆ,” ಎಂದು ಹೇಳಿದರು.
ಗೃಹ ಆರೋಗ್ಯ ಯೋಜನೆ — 1 ಕೋಟಿ ಜನರ ತಪಾಸಣೆ ಪೂರ್ಣ…
ಸಚಿವರು ಮುಂದುವರಿಸಿ…
“ರಾಜ್ಯವ್ಯಾಪಿ ಜಾರಿಗೆ ತಂದಿರುವ ಗೃಹ ಆರೋಗ್ಯ ಯೋಜನೆಯಡಿ 30 ವರ್ಷ ಮೇಲ್ಪಟ್ಟವರಿಗೆ ಮಧುಮೇಹ, ರಕ್ತದೊತ್ತಡ, ಕೆಲ ಕ್ಯಾನ್ಸರ್ ಸೇರಿದಂತೆ 14 ವಿಧದ ಅಸಾಂಕ್ರಮಿಕ ರೋಗಗಳ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಈಗಾಗಲೇ 1 ಕೋಟಿಗಿಂತ ಹೆಚ್ಚು ಜನರು ಪರೀಕ್ಷೆಗೆ ಒಳಗಾಗಿದ್ದಾರೆ,” ಎಂದು ಮಾಹಿತಿ ನೀಡಿದರು.
ಆರೋಗ್ಯ ಮತ್ತು ಶಿಕ್ಷಣ — ಈ ಎರಡೂ ಕ್ಷೇತ್ರಗಳು ದೇಶದ ಅಭಿವೃದ್ಧಿಯ ಮೂಲ ಎಂದು ಅವರು ತಿಳಿಸಿದರು. “ಸರ್ಕಾರ ಒಬ್ಬತ್ತಿನಿಂದ ಮಾತ್ರ ಆರೋಗ್ಯ ಜಾಗೃತಿ ಮೂಡಿಸುವುದು ಕಷ್ಟ. ಸಮಾಜಮುಖಿ ಸಂಸ್ಥೆಗಳೂ ತೊಡಗಿಕೊಂಡರೆ ಅಭಿಯಾನ ಹೆಚ್ಚು ಪರಿಣಾಮಕಾರಿ ಆಗುತ್ತದೆ,” ಎಂದರು.
ಜಂಕ್ ಫುಡ್ ಸೇವನೆ ತಗ್ಗಿಸಿ, ಪೋಷಕಾಂಶಯುಕ್ತ ಆಹಾರವನ್ನು ಆರಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂಬ ಸಲಹೆಯನ್ನೂ ಸಚಿವರು ನೀಡಿದರು.
ಅಭಿಯಾನಕ್ಕೆ ಸಮಾಜಮುಖಿ ಸಂಸ್ಥೆಗಳ ಬೆಂಬಲ..
ಫೌಂಡೇಶನ್ ಅಧ್ಯಕ್ಷೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, “ಬೆಂಗಳೂರಿನ ‘ಆರೋಗ್ಯ ಸಿಟಿ’ ಯೋಜನೆಯ ಯಶಸ್ಸಿನ ಬೆನ್ನಿಗೇ ಮೈಸೂರಿನಲ್ಲಿ ಸ್ವಸ್ಥ ಮೈಸೂರು ಅಭಿಯಾನವನ್ನು ಆರಂಭಿಸಿದ್ದೇವೆ. ಅಸಾಂಕ್ರಮಿಕ ರೋಗಗಳ ಬಗ್ಗೆ ಜನರ ಜಾಗೃತಿ ಹೆಚ್ಚಿಸುವುದು ನಮ್ಮ ಗುರಿ,” ಎಂದರು.
ಆರೋಗ್ಯ ವರ್ಲ್ಡ್ ಸಂಸ್ಥಾಪಕಿ ನಳಿನಿ ಸಾಲಿಗ್ರಾಮ ಅವರು, “ನಾಡಿನಲ್ಲಿ ಶೇಕಡಾ 80ರಷ್ಟು ಜನರು ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು ಶೇಕಡಾ 40ರಷ್ಟು ಜನರು ವಿವಿಧ ರೀತಿಯ ಕ್ಯಾನ್ಸರ್‌ಗಳಿಗೆ ಒಳಗಾಗುತ್ತಾರೆ. ಈಗಲೇ ಕ್ರಮ ಕೈಗೊಂಡಿಲ್ಲದೆ ಹೋದರೆ ಭವಿಷ್ಯದಲ್ಲಿ ಇದು ದೊಡ್ಡ ಸವಾಲಾಗಲಿದೆ,” ಎಂದು ಎಚ್ಚರಿಸಿದರು.
ಏನಿದೆ “ಸ್ವಸ್ಥ ಮೈಸೂರು” ಅಭಿಯಾನದಲ್ಲಿ?
ಸುಮಾರು 15 ಕಂಪನಿಗಳು, ಆಸ್ಪತ್ರೆಗಳು, ಸರ್ಕಾರಿ ಮತ್ತು ನಾಗರಿಕ ಸಮಾಜ ಸಂಘಗಳು ಅಭಿಯಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸಾರ್ವಜನಿಕ ಪ್ರತಿಜ್ಞೆಗಳನ್ನು ಪುನರುಚ್ಚರಿಸಲಾಯಿತು.
ಪ್ರಮುಖ ಗುರಿಗಳು: NCD ಗಳ ತಪಾಸಣೆ
ದೈಹಿಕ ಚಟುವಟಿಕೆ ಹೆಚ್ಚಿಸುವುದು ಆರೋಗ್ಯಕರ ಆಹಾರ ಸೇವನೆಯನ್ನು ಉತ್ತೇಜಿಸುವುದು.
ಮಾನಸಿಕ ಆರೋಗ್ಯವನ್ನು ಬಲಪಡಿಸುವುದು
ಹದಿಹರೆಯದವರ ಆರೋಗ್ಯ ಜಾಗೃತಿಯನ್ನು ವೃದ್ಧಿಸುವುದು.

