ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟಕ್ಕೆ ಸಿಸಿಬಿ ದಾಳಿ – ಇಬ್ಬರು ಆರೋಪಿತರ ಬಂಧನ…
ನಗರದ ನುರಾನಿ ಮಸೀದಿ ಹತ್ತಿರ, ಅಲ್ಅಮೀನ್ ಅಪಾರ್ಟ್ಮೆಂಟ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿದ್ದ ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟದ ಮೇಲೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ವಿಶೇಷ ವಿಚಾರಣಾ ದಳದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ದಿ. 18.06.2025 ರಂದು ಸಂಜೆ ಸುಮಾರು 4.45ರ ವೇಳೆಗೆ ಪ್ರಕರಣ ಸಂಬಂಧ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ಪೆಕ್ಟರ್ ನಾಗಪ್ಪ ಅಂಬಿಗೇರ್ ಅವರು ದಳದ ಎಸಿಪಿ ಅವರಿಂದ ಶೋಧನಾ ವಾರೆಂಟ್ ಹಾಗೂ ದಾಳಿ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಸ್ಥಳಕ್ಕೆ ತೆರಳಿದರು. ಪೊಲೀಸರು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 6.40ರ ವೇಳೆಗೆ ದಾಳಿ ನಡೆಸಿ ಆರೋಪಿತರಾದ ಉಜ್ವಲ್ ಮತ್ತು ಮಂಜುನಾಥ್ ಎಂಬುವರನ್ನು ಸ್ಥಳದಲ್ಲಿಯೇ ಬಂಧಿಸಿದರು.
ಬಂಧಿತರಿಂದ ₹9,300 ನಗದು, 2 ಮೊಬೈಲ್ ಫೋನ್ಗಳು ಹಾಗೂ 21 ಆನ್ಲೈನ್ ಬೆಟ್ಟಿಂಗ್ ಸ್ಕ್ರೀನ್ಶಾಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಯಾವುದೇ ವಿಧದ ಅಧಿಕೃತ ಲೈಸೆನ್ಸ್ ಇಲ್ಲದೆ ಆನ್ಲೈನ್ ಮೂಲಕ ಸಾರ್ವಜನಿಕರಿಂದ ಹಣ ಪಣವಾಗಿ ಪಡೆಯುತ್ತಾ, ಕುದುರೆ ರೇಸ್ ಗೆ ಸಂಬಂಧಿಸಿದ ಜೂಜಾಟದಲ್ಲಿ ತೊಡಗಿರುವುದು ಗೊತ್ತಾಗಿದೆ.
ಆರೋಪಿತರನ್ನು ತಿಲಕ್ ನಗರದ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ, ನ್ಯಾಯಾಲಯದ ಅನುಮತಿ ಮೇರೆಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

