ವಾಟ್ಸ್‌ಆಪ್ ಹ್ಯಾಕ್ ಮಾಡಿ, ಸ್ನೇಹಿತ ಎಂದು ನಂಬಿಸಿ ₹70,000 ಮೋಸ – ಸೈಬರ್ ಕ್ರೈಂನಲ್ಲಿ ದೂರು
ವಾಟ್ಸ್‌ಆಪ್ ಖಾತೆ ಹ್ಯಾಕ್ ಮಾಡಿ ಹಣದ ಬೇಡಿಕೆ ಇಟ್ಟು, ಆನ್‌ಲೈನ್ ಮೂಲಕ ₹70,000 ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಡೆಪಲ್ಲಿ ಮಧು ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಮಧು ರವರು ನೀಡಿರುವ ದೂರಿನ ಪ್ರಕಾರ, ಜೂನ್ 19, 2025 ರಂದು ಬೆಳಿಗ್ಗೆ ಸುಮಾರು 11:30ಕ್ಕೆ ಅವರ ಸ್ನೇಹಿತ ವೆಂಕಟಶಿವ ಪ್ರಸಾದ್ ಅವರ ವಾಟ್ಸ್‌ಆಪ್ ನಂಬರ್ (8197449432) ಮೂಲಕ ಹಣಕ್ಕಾಗಿ ಸಂದೇಶ ಬಂದಿದೆ. ಕೆಲಸದ ಒತ್ತಡದಲ್ಲಿದ್ದ ಮಧು, ಅದು ನಿಜವಾದ ಸಂದೇಶವೆಂದು ನಂಬಿ ಯಾವುದೇ ದೃಢೀಕರಣವಿಲ್ಲದೇ ಮೆಸೇಜಿನಲ್ಲಿ ನೀಡಲಾಗಿದ್ದ 8271987069 ನಂಬರ್‌ಗೆ PhonePe ಮತ್ತು Google Pay ಮೂಲಕ ಒಟ್ಟು ₹70,000 ಹಣವನ್ನು ವರ್ಗಾವಣೆ ಮಾಡುತ್ತಾರೆ.
ಆದರೆ ಸ್ವಲ್ಪ ಹೊತ್ತಿನ ನಂತರ, ಅವರ ಇತರ ಸ್ನೇಹಿತರೂ ಇದೇ ರೀತಿಯ ವಾಟ್ಸ್‌ಆಪ್ ಸಂದೇಶಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಮಧುವಿಗೆ ಲಭ್ಯವಾಗಿದ್ದು, ತಕ್ಷಣವೇ ಆತ ವೆಂಕಟಶಿವ ಪ್ರಸಾದ್ ಅವರ ವಾಟ್ಸ್‌ಆಪ್ ಹ್ಯಾಕ್ ಆಗಿರುವ ಶಂಕೆಗೆ ಒಳಗಾಗುತ್ತಾರೆ. ಬಳಿಕ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದು, ದೂರು ಸ್ವೀಕೃತಿ ಸಂಖ್ಯೆ 31606250073532 ಆಗಿದೆ.
ಈ ಘಟನೆ ಸಂಬಂಧ ಅಪರಿಚಿತ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಧುರವರು ಕೇಳಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆ ತನಿಖೆ ಆರಂಭಿಸಿದೆ.
ಸೈಬರ್ ವಂಚನೆ ತಡೆಗೆ ಎಚ್ಚರಿಕೆ ಅಗತ್ಯ:
ಈ ಸಂದರ್ಭ ಸಾರ್ವಜನಿಕರು ಯಾವುದೇ ಹಣದ ಬೇಡಿಕೆ ಬಂದಾಗ ನೇರವಾಗಿ ಸಂಪರ್ಕಿಸಿ ದೃಢೀಕರಣ ಪಡೆದು ನಂತರವೇ ಹಣ ವರ್ಗಾವಣೆ ಮಾಡುವುದು ಅವಶ್ಯಕವಾಗಿದೆ ಎಂದು ಸೈಬರ್ ಕ್ರೈಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

