ಹೊಸಕೋಟೆ ಪಾಠಶಾಲೆಯಲ್ಲಿ ಮಾದಕ ವ್ಯಸನ ತಡೆ ಜಾಗೃತಿ ಕಾರ್ಯಕ್ರಮ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸಕೋಟೆಯಲ್ಲಿ ಜುಲೈ 19, 2025 ರಂದು ‘ಸಂಭ್ರಮ ಶನಿವಾರ’ದ ಅಂಗವಾಗಿ “ಮಾದಕ ವಸ್ತುಗಳ ದುರುಪಯೋಗ ತಡೆಗೆ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಸನದ ವಿರುದ್ಧ ಚೇತನತ್ಮಕ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿತ್ತು.
ಕಾರ್ಯಕ್ರಮಕ್ಕೆ ಎಲೆರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀ ಗಂಗಾಧರ್ ಸಿಎಚ್ಒ ಮತ್ತು ಉಮಾಪತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಕ್ಕಳಿಗೆ ಮಾದಕ ವಸ್ತುಗಳ ಹಾನಿಕರ ಪರಿಣಾಮಗಳ ಕುರಿತು ಸಮರ್ಪಕವಾದ ಮಾಹಿತಿ ನೀಡಿದರು. ಅವರು ವ್ಯಸನದ ಗೀಳು ಹೇಗೆ ಪ್ರಾರಂಭವಾಗುತ್ತದೆ ಮತ್ತು ಅದು ವ್ಯಕ್ತಿ ಹಾಗೂ ಕುಟುಂಬದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬ ಕುರಿತು ಮನ ಮುಟ್ಟುವಂತೆ ವಿವರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತಾದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ನಾಟಕದ ಮೂಲಕ ಮಕ್ಕಳಿಗೆ ನೈಜ ಜೀವನದ ಉದಾಹರಣೆಗಳ ಮೂಲಕ ವ್ಯಸನದ ಹಾನಿಗಳನ್ನು ತೋರಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ “ನಾನು ಎಂದಿಗೂ ಸಿಗರೇಟು, ಡ್ರಗ್ಸ್, ಅಥವಾ ಯಾವುದೇ ಮಾದಕ ವಸ್ತುವನ್ನು ಸೇವನೆ ಮಾಡುವುದಿಲ್ಲ” ಎಂಬ ಶಪಥವನ್ನು ವಿದ್ಯಾರ್ಥಿಗಳು ಮಾಡಿಕೊಂಡರು. “ವ್ಯಸನ ಮುಕ್ತ ಹೊಸಕೋಟೆ – ಮಾದಕ ವಸ್ತು ಮುಕ್ತ ಸಮುದಾಯ” ಎಂಬ ಆಶಯದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಕಾಂತಪ್ಪ, ಸಹ ಶಿಕ್ಷಕರಾದ ದೇವರಾಜು, ಹರೀಶ್ ಕುಮಾರ್ ಮತ್ತು ಮಂಜುಳಾ ಅವರು ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

