ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಹಲ್ಲೆ – “ನಾನು ರೌಡಿ ಬಾಬು” ಎಂದು ಬೆದರಿಕೆ ಹಾಕಿದ ದುಷ್ಕರ್ಮಿ
ಬೆಂಗಳೂರು, ಜುಲೈ 31–2025
ಬೆಂಗಳೂರಿನ ಬ್ಯಾಟರಾಯನಪುರದ ಪಾರ್ಕ್ ವ್ಯೂ ಲೇಔಟ್ನಲ್ಲಿ ಉದ್ಯೋಗದಲ್ಲಿದ್ದ ಕಾರ್ಮಿಕನೊಬ್ಬನ ಮೇಲೆ ದುಷ್ಕರ್ಮಿಯೊಬ್ಬ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಆರಸೀಕೆರೆ ತಾಲೂಕು, ಕಲ್ಕೆರೆ ಗ್ರಾಮದ ಮೂಲದ ಆದರ್ಶ್ ಎಂಬ ಯುವಕ, ಇಲ್ಲಿ ಒಂದು ವರ್ಷದಿಂದ ಅಶೋಕ್ ಎಂಬವರ ಅಂಗಡಿಯಲ್ಲಿ ವಾಸವಾಗಿದ್ದು, ಕೆಲಸ ಮಾಡಿಕೊಂಡಿದ್ದನು.
ದಿನಾಂಕ 28-07-2025 ರಂದು ರಾತ್ರಿ ಸುಮಾರು 8:35ರ ವೇಳೆಗೆ, ಅಂಗಡಿಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದು “ಹೆಲೈಟ್ ಬೇಕು” ಎಂದು ಕೇಳಿದ್ದ. ಅದಕ್ಕೆ ಆದರ್ಶ್ 1100 ರೂ. ಬೆಲೆಯ ಹೆಲೈಟ್ ನೀಡಿದ್ದು, ಹಣ ಕೇಳಿದಾಗ ಆ ವ್ಯಕ್ತಿ ಕೋಪಗೊಂಡು “ನಾನು ಯಾರು ಗೊತ್ತಾ? ನಾನು ರೌಡಿ ಬಾಬು” ಎಂದು ಬೆದರಿಸಿ, ಹೆಲೈಟ್ ನಿಂದ ಆತನ ಎಡಭುಜಕ್ಕೆ ಹೊಡೆದು, ನಂತರ ಕೊರಳಿನ ಪಟ್ಟಿಯನ್ನು ಹಿಡಿದು ಎಡಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ.
ಘಟನೆ ಬಳಿಕ ಅಂಗಡಿಯ ಮಾಲೀಕ ಅಶೋಕ್ ಅವರಿಗೆ ಕರೆಮಾಡಿ ವಿಷಯ ತಿಳಿಸಲಾಗಿದ್ದು, ಅವರು ಸ್ಥಳಕ್ಕಾಗಮಿಸಿ ವಿಷಯವನ್ನು ದೃಢಪಡಿಸಿದ್ದಾರೆ. ಆರೋಪಿಯು ಹಲ್ಲೆ ಮಾಡಿ ಹೈರಾಣೆ ಮಾಡಿದ ಪರಿಣಾಮ ಆದರ್ಶ್ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

