ಎಂ.ಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ
ಬೆಂಗಳೂರು 23 ಆಗಸ್ಟ್ 2025
ಯಲಹಂಕ ಎಂ.ಎಸ್ ಪಾಳ್ಯ ಮುಖ್ಯರಸ್ತೆಯ ಆಯೇಶಾ ಹೋಟೆಲ್ ಹತ್ತಿರ ಅಮೆಜಾನ್ ಗೂಡ್ಸ್ ವಾಹನದ ಚಾಲಕನ ಮೇಲೆ ಬೈಕ್ ಸವಾರ ಮತ್ತು ಅವನ ಸ್ನೇಹಿತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಸಂಜಯ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ಟಾಟಾ ವಿನೋ ವಾಹನ (ನಂ. KA 04 S 1990) ಚಾಲನೆ ಮಾಡುತ್ತಾನೆ. ಬೆಳಿಗ್ಗೆ ಸುಮಾರು 8.45ಕ್ಕೆ ಯಲಹಂಕದ ಕಡೆಗೆ ತೆರಳುತ್ತಿದ್ದಾಗ, ಸುಮಾರು 9.10ರ ಸುಮಾರಿಗೆ ಆಯೇಶಾ ಹೋಟೆಲ್ ಹತ್ತಿರ ಕೆಎ 01 ಎಸ್ 7128 ನಂಬರಿನ ಬೈಕ್ ಸವಾರ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದಿದ್ದಾನೆ. ಸಂಜಯ್ ಅವರು ತಕ್ಷಣ ಬ್ರೇಕ್ ಹಾಕಿ ಹಾರ್ನ್ ಹಾಕಿದ ಹಿನ್ನೆಲೆಯಲ್ಲಿ ಬೈಕ್ ಸವಾರ ಕೋಪಗೊಂಡು ಅವಾಚ್ಯ ಪದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಮೂಗಿಗೆ ಹೊಡೆದಿದ್ದಾನೆ.
ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಸ್ಥಳಕ್ಕೆ ಬಂದ ಇಬ್ಬರು ಸಹಚರರೂ “ಇದು ನಮ್ಮ ಏರಿಯಾ, ಇಲ್ಲಿ ಹಾರ್ನ್ ಹಾಕಬಾರದು” ಎಂದು ಬೈದಿದ್ದಾರೆ. ನಂತರ ದೂರುದಾರನು ವಾಹನದತ್ತ ಹೋಗುತ್ತಿದ್ದಾಗ ಬೈಕ್ ಸವಾರ ಹಿಂದಿನಿಂದ ತಲೆಯ ಹಿಂಭಾಗಕ್ಕೆ ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿದ್ದಾನೆ.
ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದು, ಗಾಯಗೊಂಡ ದೂರುದಾರನು ಕೆರ್ವೆಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಬಳಿಕ ವಿದ್ಯಾರಣ್ಯಪುರ ಠಾಣೆಗೆ ಬಂದು ದೂರು ನೀಡಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ

