ಅಂಕಣ 

ಸತ್ಯದ ಸಾಕ್ಷಾತ್ಕಾರ……..

Taluknewsmedia.com

ಸತ್ಯದ ಸಾಕ್ಷಾತ್ಕಾರ……..

ಆತ್ಮಾವಲೋಕನದ ದಾರಿಯಲ್ಲಿ…….

ಸತ್ಯದ ಹುಡುಕಾಟದಲ್ಲಿಯು ಮನಸ್ಸು ಮಲಿನವಾಗುತ್ತಾ ಸಾಗುತ್ತದೆ…..

ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಭಿಸುತ್ತದೆ.

ಹೀಗೆ ಮಾತನಾಡಿದರೆ ನಮಗೆ ಮೆಚ್ಚುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ.

ಹಾಗೆ ಮಾತನಾಡಿದರೆ ನಮಗೆ ವಿರೋಧ ವ್ಯಕ್ತವಾಗುತ್ತದೆ ಎಂದೂ ಅರಿವಾಗತೊಡಗುತ್ತದೆ.

ಬೇರೆಯವರನ್ನು ಹೇಗೆ ಮೆಚ್ಚಿಸಬೇಕು,
ಬೇರೆಯವರನ್ನು ಹೇಗೆ ಉದ್ರೇಕಿಸಬೇಕು,
ಬೇರೆಯವರನ್ನು ಹೇಗೆ ಘಾಸಿಗೊಳಿಸಬೇಕು,
ಬೇರೆಯವರನ್ನು ಹೇಗೆ ಅವಮಾನಿಸಬೇಕು,
ಬೇರೆಯವರನ್ನು ಹೇಗೆ ನಿರ್ಲಕ್ಷಿಸಬೇಕು,
ಬೇರೆಯವರನ್ನು ಹೇಗೆ ಕೆಟ್ಟವರನ್ನಾಗಿ ಮಾಡಬೇಕು,
ಬೇರೆಯವರನ್ನು ಹೇಗೆ ಟಾರ್ಗೆಟ್ ಮಾಡಬೇಕು,
ಎಂದು ಸ್ಪಷ್ಟವಾಗುತ್ತಾ ಹೋಗುತ್ತದೆ.

ಹಾಗೆಯೇ,
ನಾವು ಹೇಗೆ ಬುದ್ದಿವಂತರೆನಿಸಿಕೊಳ್ಳಬೇಕು,
ನಾವು ಹೇಗೆ ಒಳ್ಳೆಯವರೆನಿಸಿಕೊಳ್ಳಬೇಕು,
ನಾವು ಹೇಗೆ ಜನಪ್ರಿಯರಾಗಬೇಕು,
ನಾವು ಹೇಗೆ ಹಣವಂತರಾಗಬೇಕು,
ನಾವು ಹೇಗೆ ಅಧಿಕಾರಕ್ಕೇರಬೇಕು,
ನಾವು ಹೇಗೆ ಪ್ರಚಾರ ಪಡೆಯಬೇಕು,
ನಾವು ಹೇಗೆ ದೊಡ್ಡವರೆನಿಸಬೇಕು,
ನಾವು ಹೇಗೆ ಪ್ರಶಸ್ತಿ ಪಡೆಯಬೇಕು,
ನಾವು ಹೇಗೆ ಸನ್ಮಾನಿಸಿಕೊಳ್ಳಬೇಕು ,
ಎಂಬುದೂ ಗೊತ್ತಾಗತೊಡಗುತ್ತದೆ.

ಈ ಮಧ್ಯೆ ಸತ್ಯದ ಹುಡುಕಾಟ ದಾರಿ ತಪ್ಪುತ್ತದೆ……..

ಆದರೆ ಇವೆಲ್ಲವನ್ನೂ ಮೀರಿ, ಸ್ವಾರ್ಥವನ್ನು ಗೆದ್ದು,
ವಿಶಾಲ ಮನೋಭಾವದಿಂದ ಮನಸ್ಸನ್ನು ನಿಯಂತ್ರಣಕ್ಕೆ ಪಡೆದುಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದಾಗ ಮಾತ್ರ ನಾವು ಸತ್ಯದ ಹತ್ತಿರಕ್ಕೆ ಹೋಗಬಹುದು.

ಇದಕ್ಕಾಗಿ ಮತ್ತೊಮ್ಮೆ ಮಗುವಿನ ಮುಗ್ಧತೆ, ಕುತೂಹಲ ಬೆಳೆಸಿಕೊಳ್ಳಬೇಕು.
ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಸಾಧ್ಯವಾದಷ್ಟು ಸ್ಥಿತಪ್ರಜ್ಞೆತೆಯಿಂದಿರಬೇಕು.

ಆತ್ಮ ವಂಚನೆ ಮಾಡಿಕೊಂಡು ಅಲ್ಲಿಯೇ ಕಳೆದುಹೋಗಬಾರದು.

ಆದರೆ ಇದು ಅಷ್ಟು ಸುಲಭವಲ್ಲ.
ಬದುಕಿನ ಸಂಕೀರ್ಣತೆ ನಮ್ಮನ್ನು ನಮ್ಮ ದಾರಿಯಲ್ಲಿ ಹೋಗಲು ಬಿಡುವುದಿಲ್ಲ. ಸಾಕಷ್ಟು ಅಡೆತಡೆಗಳು ಎದುರಾಗುತ್ತದೆ. ಅದನ್ನು ದೃಢವಾಗಿ ಎದುರಿಸಬೇಕು. ಬಹುಮುಖ್ಯವಾಗಿ ನಿರಂತರತೆ ಕಾಪಾಡಿಕೊಳ್ಳಬೇಕು.

ಇತರರ ಹಾಸ್ಯ ವ್ಯಂಗ್ಯ ಕೋಪ ಅಸೂಯೆ ಕಾಲೆಳೆಯುವಿಕೆ ಜೊತೆಗೆ,
ನಮ್ಮ ಕಣ್ಣ ಮುಂದಿನ ಹಣ ಅಧಿಕಾರ ಪ್ರಚಾರ ಪ್ರಶಸ್ತಿ ಸನ್ಮಾನಗಳ ಮೋಹವನ್ನು ಗೆಲ್ಲಬೇಕು.
ಅಲಂಕಾರವನ್ನು ಮೆಟ್ಟಿ ನಿಲ್ಲಬೇಕು.
ಆಗ ಸತ್ಯದ ಸನಿಹ ಹೋಗಬಹುದು.

ನಾವೆಲ್ಲಾ ಸತ್ಯದ ಹುಡುಕಾಟದ ಒಂದೇ ದೋಣಿಯ ಪಯಣಿಗರಾಗೋಣ,
ಒಂದೇ ಬಳ್ಳಿಯ ಹೂವುಗಳಾಗೋಣ,
ಆ ನಿರೀಕ್ಷೆಯಲ್ಲಿ ………………

ಸತ್ಯದ ಗಾಂಧಿ….


ಸತ್ಯದ ಶುಧ್ಧತೆ ಮತ್ತು ಪ್ರಾಮಾಣಿಕ ಸತ್ಯದ ನಿಷ್ಕಳಂಕ ವ್ಯಕ್ತಿತ್ವವನ್ನು
ಸ್ಪಷ್ಟವಾಗಿ ಸಾರುವ ಒಂದು ಸಣ್ಣ ಕಥೆ ಮಹಾತ್ಮ ಗಾಂಧಿಯವರ ದೃಷ್ಟಿಕೋನದಲ್ಲಿ.
ಎಲ್ಲೋ ಓದಿದ್ದು…..‌

ಒಮ್ಮೆ ಬ್ರಿಟಿಷ್ ವ್ಯಕ್ತಿಯೊಬ್ಬ ಗಾಂಧಿಯವರ ಬಳಿ ಅವರ ಸತ್ಯ ನಿಷ್ಠೆಯನ್ನು ಪ್ರಶ್ನೆ ಮಾಡುವ ಅಥವಾ ಅವಹೇಳನ ಮಾಡುವ ರೀತಿಯಲ್ಲಿ ಅವರಿಗೆ ಹೀಗೆ ಹೇಳುತ್ತಾನೆ.
” ಗಾಂಧಿಯವರೆ, ನಿಮ್ಮ ಕಠೋರ ಸತ್ಯ ಎಷ್ಟೊಂದು ಅಮಾನವೀಯ ಗೊತ್ತೆ. ಒಮ್ಮೆ ಒಬ್ಬ ಬೇಟೆಗಾರ ಒಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡುತ್ತಾ ಬರುವ ಜಿಂಕೆ ದಾರಿಯಲ್ಲಿ ಒಂದು ಮರದ ಕೆಳಗೆ ತಪಸ್ಸು ಮಾಡುತ್ತಾ ಕುಳಿತಿದ್ದ ಮಹಾನ್ ಸತ್ಯಸಂಧ ಮುನಿಯ ಬಳಿ
” ಅಯ್ಯಾ ಋಷಿ , ಬೇಟೆಗಾರನೊಬ್ಬ ನನ್ನನ್ನು ಕೊಲ್ಲಲು ಬರುತ್ತಿದ್ದಾನೆ. ದಯವಿಟ್ಟು ರಕ್ಷಿಸು. ತಪ್ಪಿಸಿಕೊಳ್ಳಲು ಜಾಗ ತೋರಿಸು ” ಎಂದು ಕೇಳಿಕೊಳ್ಳುತ್ತದೆ.

ಆಗ ಋಷಿ ‘ ಆಯಿತು. ಇಲ್ಲೇ ನನ್ನ ಹಿಂದೆ ಇರುವ ಆ ಗುಹೆಯಲ್ಲಿ ಅಡಗಿಕೋ’ ಎಂದು ಹೇಳುತ್ತಾನೆ.

ಸ್ವಲ್ಪ ಹೊತ್ತಿನಲ್ಲಿ ಜಿಂಕೆಯನ್ನು ಹುಡುಕುತ್ತಾ ಅದೇ ದಾರಿಯಲ್ಲಿ ಬಂದ ಬೇಟೆಗಾರ ಅಲ್ಲಿದ್ದ ಅದೇ ಮುನಿಯನ್ನು
” ಋಷಿವರ್ಯ ನಾನೊಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದೆ ನೀವೇನಾದರೂ ನೋಡಿದಿರೆ “

ಅದಕ್ಕೆ ಎಂದೂ ಸುಳ್ಳಾಡದ ಆ ಮುನಿ
‘ ಹೌದು ನೋಡಿದೆ ‘ ಎನ್ನುತ್ತಾನೆ. ಬೇಟೆಗಾರ ‘ ಹಾಗಾದರೆ ಎಲ್ಲಿ ಹೋಯಿತು’

ಆಗ ಮುನಿ ‘ ನನ್ನನ್ನು ರಕ್ಷಣೆಗಾಗಿ ಕೇಳಿಕೊಂಡಿತು. ನಾನೇ ಹಿಂದೆ ಇರುವ ಗುಹೆಯಲ್ಲಿ ಬಚ್ಚಿಟ್ಟುಕೊಳ್ಳಲು ಹೇಳಿದ್ದೇನೆ’

ಅದನ್ನು ಕೇಳಿದ ಬೇಟೆಗಾರ ಗುಹೆಗೆ ಹೋಗಿ ಜಿಂಕೆಯನ್ನು ಕೊಂದು ಹೊತ್ತೊಯ್ಯುತ್ತಾನೆ.”

ಈ ಕಥೆಯನ್ನು ಗಾಂಧಿಗೆ ಹೇಳಿದ ಆ ಬ್ರಿಟಿಷ್ ” ನೋಡಿದಿರಾ ಗಾಂಧಿ, ಸಾಮಾನ್ಯ ಸಮಯ ಪ್ರಜ್ಞೆ ಇಲ್ಲದ ಮುನಿ ಒಂದು ಸಣ್ಣ ಸುಳ್ಳು ಹೇಳಿದ್ದರೆ ಆ ಅಮಾಯಕ ಜಿಂಕೆಯ ಪ್ರಾಣ ಉಳಿಸಬಹುದಿತ್ತು. ನಿಮ್ಮ ಆ ಸತ್ಯ ಕೂಡ ಕೆಲವೊಮ್ಮೆ ಎಷ್ಟೊಂದು ಕಠೋರ “

ಅದಕ್ಕೆ ಗಾಂಧಿಯ ಉತ್ತರ
” ಗೆಳೆಯ, ನಿಮ್ಮ ಕಥೆಯಲ್ಲಿ ತಪ್ಪು ಸತ್ಯದ್ದಲ್ಲ. ಅದು ಋಷಿಮುನಿಯದು. ಒಂದು ವೇಳೆ ನಾನು ಋಷಿಯ ಜಾಗದಲ್ಲಿದ್ದಿದ್ದರೆ ಬೇಟೆಗಾರ ಬಂದು ಕೇಳಿದಾಗ
‘ ಹೌದು ಜಿಂಕೆಯನ್ನು ನಾನೇ ಬಚ್ಚಿಟ್ಟಿದ್ದೇನೆ, ಅದು ಇರುವ ಜಾಗ ತಿಳಿದಿದೆ. ಆದರೆ ಅದನ್ನು ನೀನು ಕೊಲ್ಲುವುದರಿಂದ ಅದು ಎಲ್ಲಿದೆ ಎಂದು ಹೇಳುವುದಿಲ್ಲ.ಅದಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದೇ ಹೇಳುತ್ತೇನೆ. ಸಮಸ್ಯೆ ಇರುವುದು ಸತ್ಯದ ಆಳದಲ್ಲಿ ಅಲ್ಲ. ಅದರ ಆಚರಣೆಗಳ ಪ್ರಾಮಾಣಿಕತೆಯಲ್ಲಿ.” ಎನ್ನುತ್ತಾರೆ.

ಮುಂದಿನ ವಿವರಣೆ ಬೇಕಿಲ್ಲ ಅಲ್ಲವೇ ?

ಸತ್ಯದ ದೈವಿಕತೆಯ ಸಾಕ್ಷಾತ್ಕಾರವೆಂದರೆ ಇದೇ….

ಮಾತಿಗಿಂತ – ಬರಹಕ್ಕಿಂತ ಬದುಕಿನ ರೀತಿಯೇ ಮುಖ್ಯ.
ಮೌಲ್ಯಗಳ ಪ್ರವಚನಕ್ಕಿಂತ ಅಳವಡಿಕೆಯೇ ನಮ್ಮ ಗುರಿಯಾಗಲಿ ಎಂಬ ಆಶಯದೊಂದಿಗೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068……..

Related posts