ಕುವೆಂಪು ಮತ್ತು ಬೈರಪ್ಪ…….
ಕುವೆಂಪು ಮತ್ತು ಬೈರಪ್ಪ…….
ಶ್ರೀ ಕುವೆಂಪು ಮತ್ತು ಶ್ರೀ ಬೈರಪ್ಪ ಎಂಬ ಸೈದ್ಧಾಂತಿಕ ಸಾಹಿತ್ಯದ ಭಿನ್ನತೆಗಳು, ಎರಡು ವಿರುದ್ಧ ಧ್ರುವಗಳು ಮತ್ತು ಬದಲಾದ ಕಾಲಘಟ್ಟದಲ್ಲಿ ಅವರ ಸಾಹಿತ್ಯಿಕ ಭಾಷೆ ಮತ್ತು ಅವರವರ ಅಭಿಮಾನಿಗಳ ಮನಸ್ಥಿತಿಗಳು……..
ಕನ್ನಡ ಸಾಹಿತ್ಯದ ಮೇರು ಪರ್ವತದಂತೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು, ಹಾಗೆಯೇ ಸಾಹಿತ್ಯ ಕ್ಷೇತ್ರದ ಮತ್ತೊಬ್ಬ ದಿಗ್ಗಜರಾದ ಎಸ್ ಎಲ್ ಭೈರಪ್ಪ ಅವರ ಪ್ರಾರಂಭಿಕ ಸಾಹಿತ್ಯ ರಚನೆಗಳು ಮತ್ತು ನಂತರದಲ್ಲಿ ಅವರಿಗೆ ಬಂದ ಪರ ವಿರೋಧದ ಕಾರಣದಿಂದಾಗಿ ಬದಲಾದ ನಿಲುವುಗಳ ಬಗ್ಗೆ ಮತ್ತೊಂದಿಷ್ಟು ಅನಿಸಿಕೆಗಳು……..
ಕುವೆಂಪು ಅವರ ಕಾಲಮಾನ 1904/1994, ಭೈರಪ್ಪನವರ ಕಾಲಮಾನ 1931/2025. ಇಬ್ಬರೂ ದೀರ್ಘಾಯುಷಿಗಳು. ಅಂದರೆ ಹತ್ತಿರ ಹತ್ತಿರ ಸುಮಾರು ಒಂದು ಶತಮಾನಗಳ ಕಾಲ ಈ ಸಮಾಜದಲ್ಲಿ ಬದುಕಿದ್ದವರು. ಪ್ರಾದೇಶಿಕವಾಗಿ ಅವರ ಭಾಷೆ ಕನ್ನಡ ಮತ್ತು ಭೌಗೋಳಿಕವಾಗಿ ಮೂಲ ಬೇರೆ ಊರಾದರೂ ಮೈಸೂರಿನ ನಿವಾಸಿಗಳು. ಅಲ್ಲೇ ಹೆಚ್ಚು ಸಮಯ ಕಳೆದವರು.
ಇಬ್ಬರೂ ಮೂಲಭೂತವಾಗಿ ಉನ್ನತ ಶಿಕ್ಷಣವನ್ನು ಪಡೆದು ಆಗಿನ ಕಾಲದಲ್ಲಿಯೇ ಅಕಾಡೆಮಿಕ್ ವಲಯದ ಸಂಪರ್ಕ ಮತ್ತು ಶೈಲಿಯ ಕಾರಣದಿಂದಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡವರು.
ಕುವೆಂಪು ಅವರು ಪಾಶ್ಚಾತ್ಯ ಸಾಹಿತ್ಯದ ಪ್ರಭಾವಕ್ಕೊಳಗಾಗಿ ಪ್ರಕೃತಿಯ ಸೊಗಡಿನ ನವ್ಯತೆಯ, ರಮ್ಯತೆಯ ಸಾಹಿತ್ಯ ರಚಿಸಿದ್ದಲ್ಲದೆ, ಮಣ್ಣಿನ ಸೊಗಡಿನ, ಗ್ರಾಮೀಣ ಪರಿಸರದ, ಮಲೆನಾಡಿನ ಹಿನ್ನೆಲೆಯ ಶುದ್ಧ ಕಾದಂಬರಿಗಳನ್ನು ಬರೆದವರು. ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಗಳನ್ನು ಮತ್ತು ಶ್ರೀ ರಾಮಾಯಣ ದರ್ಶನಂ ಎಂಬ ಮಹಾ ಗ್ರಂಥವನ್ನು ಬರೆದವರು. ಜೊತೆಗೆ ಕವಿ ನಾಟಕಕಾರ, ಚಿಂತಕರಾಗಿಯೂ ಗುರುತಿಸಿಕೊಂಡವರು. ವಿಶ್ವವಿದ್ಯಾಲಯದ ವಿವಿಧ ಹುದ್ದೆಗಳೊಂದಿಗೆ ಕುಲಪತಿಯಾಗಿ ನಿವೃತ್ತರಾದವರು.
ಬೈರಪ್ಪನವರು ಸಹ ಆಗಿನ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕಾದಂಬರಿಗಳನ್ನು ಬರೆದವರು. ಗೃಹಭಂಗ, ದಾಟು, ಗ್ರಹಣ, ಮುಂತಾದ ಮುಂತಾದ ಸಾಮಾಜಿಕ ವ್ಯವಸ್ಥೆಯ ಕುರಿತ ಕಾದಂಬರಿಗಳಲ್ಲದೆ ಪರ್ವ ಎಂಬ ಮಹಾಭಾರತದ ವಿಮರ್ಶಾತ್ಮಕ ಕೃತಿಯನ್ನು ಬರೆದಿದ್ದಾರೆ. ಸಾಹಿತ್ಯದ ವಿಮರ್ಶೆಗಳನ್ನು ರಚಿಸಿದ್ದಾರೆ.
ಇಲ್ಲಿ ಕುವೆಂಪು ಅವರ ಕಾಲಘಟ್ಟದಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ, ವಿಶ್ವವಿದ್ಯಾಲಯದ ಪ್ರತಿಷ್ಠಿತ ಹುದ್ದೆಗಳು, ಕನ್ನಡ ಸಮ್ಮೇಳನಗಳ ಅಧ್ಯಕ್ಷತೆ ಮುಂತಾದ ಕಾರಣದಿಂದ ಆಗಿನ ಕಾಲದ ಮೇಲ್ವರ್ಗದ ಕೆಲವು ಸ್ಥಾಪಿತ ಹಿತಾಸಕ್ತಿಗಳ ಸಾಹಿತಿ, ವಿಮರ್ಶಕರು ( ಸಹಜವಾಗಿಯೇ ಆಗ ಬರೆಯುತ್ತಿದ್ದ ಹೆಚ್ಚು ಜನರು ಬ್ರಾಹ್ಮಣ ಸಮುದಾಯದವರೇ ಆಗಿದ್ದುದರಿಂದ ಜೊತೆಗೆ ಆಗಿನ ಸಾಹಿತ್ಯದ ಪರಿಭಾಷೆಯೇ ಮೇಲ್ವರ್ಗದ ನಿಯಂತ್ರಣಕ್ಕೆ ಒಳಪಟ್ಟಿತ್ತು ) ಅವರ ಟೀಕೆಗಳನ್ನು ಸಹ ಎದುರಿಸಬೇಕಾಗಿತ್ತು. ಅನೇಕ ಕಡೆ ಕುವೆಂಪು ಎಂಬ ಶೂದ್ರ ತಪಸ್ವಿ ಕನ್ನಡ ಸಾಹಿತ್ಯದ ಮೇರು ಪರ್ವತವಾಗಿ, ರಾಷ್ಟ್ರಕವಿಯಾಗಿ ಬೆಳೆಯುತ್ತಿರುವುದನ್ನು ಪರೋಕ್ಷವಾಗಿ ಸಹಿಸದ ಆಗಿನ ಕಾಲದ ಕೆಲವು ಸಾಹಿತಿಗಳು ಇವರನ್ನು ಪತ್ರಿಕೆಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಖಾಸಗಿ ಪತ್ರಗಳಲ್ಲಿ, ಹರಟೆ ಮಾತುಕತೆಗಳಲ್ಲಿ ತೀವ್ರವಾಗಿ ಟೀಕಿಸುತ್ತಾರೆ.
ಅವರದು ನೈಜ ಸಾಹಿತ್ಯವಲ್ಲ, ಅವರೊಬ್ಬ ಸಾಮಾನ್ಯ ಬರಹಗಾರ ಮುಂತಾಗಿ ಕಠಿಣ ಪದಗಳ ನಿಂದನೆ ಇರುತ್ತದೆ. ( ಡಾಕ್ಟರ್ ರಾಜ್ ಕುಮಾರ್ ಅವರಿಗೂ ಈ ನಿಂದನೆಗಳ ಅನುಭವ ಆಗಿತ್ತು ಎಂದು ಹೇಳುವವರು ಇದ್ದಾರೆ ) ಆಗಿನ ಕಾಲದಲ್ಲಿ ದೂರವಾಣಿ ಮತ್ತು ಪತ್ರ ವ್ಯವಹಾರದ ಮೂಲಕ ನಡೆಯುತ್ತಿದ್ದ ಈ ಅಭಿಪ್ರಾಯಗಳು, ಗಾಳಿಮಾತುಗಳು ಖಂಡಿತವಾಗಲೂ ಕುವೆಂಪು ಅವರ ಅರಿವಿಗೆ ಬಂದೇ ಇರುತ್ತದೆ. ಆನಂತರ ಅವರ ಬರಹದ ತೀವ್ರತೆ ಹೆಚ್ಚಾಗುತ್ತದೆ ಮತ್ತು ತಮ್ಮ ಟೀಕಾಕಾರರಿಗೆ, ಸೈದ್ಧಾಂತಿಕ ವಿರೋಧಿಗಳಿಗೆ ಉತ್ತರ ರೂಪದಲ್ಲಿ ಅನೇಕ ಕೃತಿಗಳನ್ನು ಬರೆಯುತ್ತಾರೆ. ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ರೈತ ಗೀತೆಗಳು ಎಲ್ಲವೂ ಪುರೋಹಿತಶಾಹಿ ಅಸಮಾನತಾ ವ್ಯವಸ್ಥೆಯ ವಿರುದ್ಧದ ನಿಲುವುಗಳೇ ಆಗಿರುತ್ತದೆ. ಜೊತೆಗೆ ವೈಜ್ಞಾನಿಕ ವೈಚಾರಿಕ ಚಿಂತನೆಗಳನ್ನು ಹರಿಯಬಿಡುತ್ತಾರೆ.
ಋಷಿ ಸಂಸ್ಕೃತಿಗೆ ವಿರುದ್ಧವಾಗಿ ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ. ಅದಕ್ಕಾಗಿ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರೇರಿತರಾಗಿ ರಾಮಕೃಷ್ಣ ಮಠದ ಸಹವಾಸದಿಂದ ಸನಾತನ ಧರ್ಮದ ಅಸಮಾನತೆ, ಅಮಾನವೀಯ ಆಚರಣೆಗಳನ್ನು ಖಂಡಿಸುತ್ತಾರೆ. ಮಂತ್ರ ಮಾಂಗಲ್ಯದಂತ ಸರಳ ವಿವಾಹ ಪದ್ಧತಿಯನ್ನು ಆಚರಣೆಗೆ ತರುವುದರ ಹಿಂದೆ ಅದ್ದೂರಿ ಆಡಂಬರದ ಮದುವೆಯ ನಿಯಂತ್ರಣದ ಜೊತೆಗೆ ಪುರೋಹಿತಶಾಹಿಯನ್ನು ತಿರಸ್ಕರಿಸುವುದೂ ಒಂದು ಕಾರಣವಾಗಿರುತ್ತದೆ. ಅಂದರೆ ಸಾಹಿತಿಯೊಬ್ಬರು ತಮ್ಮ ಮೇಲಿನ ಟೀಕೆಗಳಿಗೆ ಸಾಹಿತ್ಯಾತ್ಮಕವಾಗಿಯೇ ಉತ್ತರಿಸುತ್ತಾ ಬದಲಾದ ಪ್ರಕ್ರಿಯೆಯನ್ನು ಇಲ್ಲಿ ಗುರುತಿಸಬಹುದು.
ಹಾಗೆಯೇ ಎಸ್ ಎಲ್ ಭೈರಪ್ಪನವರು ತಮಗೆ ಅನಿಸಿದ, ತಾವು ಕಂಡ ಸಾಮಾಜಿಕ ವ್ಯವಸ್ಥೆಯನ್ನು, ಆಗಿನ ಕಾಲಘಟ್ಟದ ಮನಸ್ಥಿತಿಯನ್ನು ಕಾದಂಬರಿ ರೂಪದಲ್ಲಿ ಬರೆಯುತ್ತಿರುವಾಗಲು ಅವರನ್ನು ಆಗಿನ ಪತ್ರಿಕೆಗಳು, ವಿಮರ್ಶಕರು ಅಷ್ಟಾಗಿ ಗಮನಿಸದಿರುವುದು, ಓದುಗರ ಸಂಖ್ಯೆ ಅತ್ಯಂತ ಜನಪ್ರಿಯ ಮಟ್ಟದಲ್ಲಿದ್ದಾಗಲೂ ಜ್ಞಾನಪೀಠ ಪ್ರಶಸ್ತಿಯಂತ ಪ್ರಶಸ್ತಿ ಅವರನ್ನು ನಿರ್ಲಕ್ಷಿಸಿದ ಕಾರಣಗಳಿಂದಾಗಿಯೂ, ಅವರ ಸಮಕಾಲೀನರು ಇವರನ್ನು ವಿಶ್ವಮಾನವತೆಯ ವಿರುದ್ಧ ಚಿಂತನೆಯಾದ ಸಂಕುಚಿತ ಕೋಮುವಾದಿ ಎಂದು ಭಾವಿಸಿ ಮುಖ್ಯವಾಹಿನಿಯಲ್ಲಿ ನಿರ್ಲಕ್ಷಿಸಿದ್ದರಿಂದ, ಸ್ವಲ್ಪ ಮುಂಗೋಪಿ ಮತ್ತು ಸ್ವ ಪ್ರತಿಷ್ಠೆಯ ಸ್ವಭಾವದವರಾದ ಬೈರಪ್ಪನವರು ಸಹ ಹೆಚ್ಚು ಹೆಚ್ಚು ಎಡಪಂತೀಯ ಅಥವಾ ಪ್ರಗತಿಪರರ ಈ ಪಕ್ಷಪಾತ ನಿಲುವಿನಿಂದ ಕೋಪಗೊಂಡು ಹೆಚ್ಚು ಹೆಚ್ಚು ಬಲಪಂಥೀಯ ನಿಲುವುಗಳಿಗೆ ಅಂಟಿಕೊಳ್ಳತೊಡಗುತ್ತಾರೆ ಮತ್ತು ಅದನ್ನು ತಮ್ಮ ಬರಹಗಳಲ್ಲಿ ತೀವ್ರವಾಗಿ ಪ್ರತಿಕ್ರಿಸುತ್ತಾರೆ.
ಅದು ನೆಹರು, ಗಾಂಧಿ, ಕಾಂಗ್ರೆಸ್ ವಿರುದ್ಧದ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ದೇಶ ವಿಭಜನೆ ಮತ್ತು ಮುಸ್ಲಿಂ ವಿರುದ್ಧವಾದ ಮನೋಭಾವನೆಯಾಗಿ ಪ್ರಕಟವಾಗುತ್ತದೆ. ಹೆಚ್ಚು ಕಡಿಮೆ ಒಬ್ಬ ಹಿಂದುತ್ವದ, ಪುರೋಹಿತಶಾಹಿಯ, ಸನಾತನ ಧರ್ಮದ ಪ್ರತಿಪಾದಕರಾಗಿ ರಾಜಕಾರಣಿಯಂತೆ ಮಾತನಾಡುತ್ತಾರೆ. ಸಾರ್ವಕರ್ ಬಗೆಗಿನ ಮೆಚ್ಚುಗೆ, ಸಂಘ ಪರಿವಾರದ ಪ್ರಬಲ ಪ್ರತಿಪಾದಕರು ಮತ್ತು ಅವರ ಒಡನಾಟದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ.
ಅಂದರೆ ಕುವೆಂಪು ಮತ್ತು ಭೈರಪ್ಪನವರ ಮೇಲೆ ಆಗಿನ ಕಾಲಘಟ್ಟದಲ್ಲಿ ಬಂದ ಟೀಕೆಗಳು, ಪ್ರಶಸ್ತಿ ಮತ್ತು ವಿಮರ್ಶೆಗಳ ರಾಜಕೀಯ ಅವರುಗಳು ತಮ್ಮ ಮೂಲ ಗುಣಗಳಾದ ಶುದ್ಧ ಸಾಹಿತ್ಯದ ಪರಿಧಿಯನ್ನು ಮೀರಿ ಸೈದ್ಧಾಂತಿಕತೆಯನ್ನು ಹೆಚ್ಚು ಸಾರ್ವಜನಿಕವಾಗಿ ಬಿಂಬಿಸಿಕೊಳ್ಳಲು ಕಾರಣವಾಗಿರಬಹುದು ಎಂದೆನಿಸುತ್ತದೆ.
ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಕುವೆಂಪು ಅವರು ಕೊನೆಯವರೆಗೂ ತಮ್ಮ ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಂಡು ಸಾರ್ವಜನಿಕವಾಗಿ ಪ್ರತಿಕ್ರಿಯಿಸುತ್ತಿದ್ದರು. ಆದರೆ ಕುವೆಂಪು ಅವರು ನಿಧನರಾದ 30 ವರ್ಷಗಳ ನಂತರವೂ, ಆಧುನಿಕ ಸಾಮಾಜಿಕ ಜಾಲತಾಣಗಳ ಕ್ರಾಂತಿಯ ನಡುವೆ ಬದುಕಿದ್ದ ಭೈರಪ್ಪನವರು ಅದರ ಪ್ರಭಾವದಿಂದಲೋ ಏನೋ ಅಥವಾ ಅವರನ್ನು ಬೆಂಬಲಿಸಿದ ಕೆಲವು ತೀವ್ರ ಬಲಪಂಥೀಯ ಚಿಂತಕರ ಒತ್ತಡದಿಂದಲೋ ಅಥವಾ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬದಲಾದ ರಾಜಕೀಯ ನಿಲುವುಗಳಿಂದಲೋ ಒಟ್ಟಾರೆ ತಮ್ಮ ಮನಸ್ಸು ಮತ್ತು ಭಾಷೆಯಲ್ಲಿ
ಸ್ವಲ್ಪಮಟ್ಟಿನ ಘನತೆಯನ್ನು ಕಳೆದುಕೊಂಡು ಕೆಲವೊಮ್ಮೆ ದ್ವೇಷ ಅಸೂಯೆಗಳ ಜೀವ ವಿರೋಧಿ ನಿಲುವುಗಳನ್ನು ಪ್ರಕಟಿಸಿದ್ದು ಕೂಡ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಹಾಗೆಂದು ಬೈರಪ್ಪನವರು ತಾವು ಕಂಡ ದೌರ್ಜನ್ಯಗಳ, ಹತ್ಯಾಕಾಂಡಗಳ ಒಳಗಿನ ಅನುಭಾವಗಳನ್ನು ಹೇಳಬಾರದು ಎಂದೇನೂ ಇಲ್ಲ. ಆ ಸ್ವಾತಂತ್ರ್ಯ ಅವರಿಗೂ ಇದೆ. ಅದನ್ನು ಅವರು ವ್ಯಕ್ತಪಡಿಸಿದ್ದಾರೆ. ಅದು ಅವರ ಅನಿಸಿಕೆ ಅಷ್ಟೇ.
ಈ ಕ್ಷಣದ ಜನರ ಮಾನಸಿಕತೆಯ ಮೇಲೆ ಇಬ್ಬರನ್ನೂ ವಾಸ್ತವ ನೆಲೆಗಟ್ಟಿನಲ್ಲಿ ವಿಮರ್ಶಿಸುವುದು ತುಂಬಾ ಕಷ್ಟ. ನಾವುಗಳು ಎರಡು ಅತಿರೇಕಗಳ ಮಧ್ಯೆ ಬದುಕುತ್ತಿದ್ದೇವೆ.
ಜೊತೆಗೆ ಜನರಿಗೆ ತಾಳ್ಮೆ, ಪ್ರಬುದ್ಧತೆ ಕಡಿಮೆಯಾಗಿ ತಮ್ಮ ಭಾಷೆ ಮತ್ತು ಪದಗಳ ಮೇಲೆ ನಿಯಂತ್ರಣವಿಲ್ಲದೇ ಪ್ರತಿಕ್ರಿಯಿಸುವ ಕಾರಣದಿಂದ ಸತ್ಯವನ್ನು, ವಾಸ್ತವವನ್ನು ವಿಮರ್ಶೆಗೆ ಒಳಪಡಿಸುವುದು ಅಷ್ಟು ಸುಲಭವೂ ಅಲ್ಲ.
ಏನೇ ಆಗಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಅಭಿಪ್ರಾಯಗಳು ಸಹಜವಾದರೂ ವೈಯಕ್ತಿಕವಾಗಿ ಹೇಳುವುದಾದರೆ, ಚಿಂತನೆಗಳಿಗೆ ಯಾವುದೇ ಸೈದ್ಧಾಂತಿಕತೆಯ ಅವಶ್ಯಕತೆ ಇಲ್ಲ. ಪ್ರಕೃತಿಯ ಮೂಲದಿಂದ, ಸಂವಿಧಾನದ ಆಶಯದ ಅಡಿಯಲ್ಲಿ, ನಾಗರಿಕ ಪ್ರಜ್ಞೆ ಇಟ್ಟುಕೊಂಡು ಅನುಭವದ ಆಧಾರದಲ್ಲಿ ಒಂದು ಅಭಿಪ್ರಾಯ ರೂಪಿಸಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆ ಅಭಿಪ್ರಾಯಗಳು ಸಹ ಬಲಿಷ್ಠರ ಪರವಾಗಿರದೆ ದುರ್ಬಲರ, ಶೋಷಿತರ ಪರವಾಗಿದ್ದರೆ ಸಮಾಜ ಒಂದಷ್ಟು ಸಹನೀಯವಾಗಿರುತ್ತದೆ.
ಏಕೆಂದರೆ ಬಲಿಷ್ಠರು, ಪ್ರಬಲರು ತಮ್ಮ ಸಾಮರ್ಥ್ಯದಿಂದ ಹೇಗೋ ಬದುಕುತ್ತಾರೆ. ತಮಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆಯುತ್ತಾರೆ. ಎಲ್ಲಾ ರೀತಿಯ ದುರ್ಬಲರು, ಅಸಹಾಯಕರು ಅದರಿಂದ ಹೊರಬರದೆ ಕಷ್ಟ ಅನುಭವಿಸುವುದರಿಂದ ಅವರ ಪರವಾಗಿ ಒಂದಷ್ಟು ಧ್ವನಿ ನಮ್ಮದಾಗಲಿ. ಅದನ್ನು ಹೊರತುಪಡಿಸಿ ಯಾವುದೇ ಸೈದ್ಧಾಂತಿಕತೆಯ ನೆಪದಲ್ಲಿ ತೀರ ಅತಿರೇಕಕ್ಕೆ ಇಳಿಯುವ ಅವಶ್ಯಕತೆ ಇಲ್ಲ. ಧನ್ಯವಾದಗಳು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…..
9844013068……

