ಅಂಕಣ 

ಸಹಾಯ ಮತ್ತು ಆತ್ಮಸಾಕ್ಷಿ……

Taluknewsmedia.com

ಸಹಾಯ ಮತ್ತು ಆತ್ಮಸಾಕ್ಷಿ……

ಸಹಾಯ – ಸೇವೆ – ನೆರವು – ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ………

ಮತ್ತು ಇದರಲ್ಲಿನ ವೈವಿಧ್ಯತೆ……………

ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ….

ಸಹಾಯ ಮಾಡಿಯೂ ಅದನ್ನು ಹೇಳಿಕೊಳ್ಳದೆ ತಮ್ಮ ಪಾಡಿಗೆ ತಾವಿರುವವರು ಇರುತ್ತಾರೆ…

ಬೇರೆಯವರಿಗೆ ಸಹಾಯ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಸಹಾಯ ಮಾಡುವವರು ಇದ್ದಾರೆ….

ಈಗ ಸಹಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟದ ಸಮಯದಲ್ಲಿ ಬೇರೆಯವರು ನಮಗೆ ಸಹಾಯ ಮಾಡಬಹುದು ಎಂಬ ಮುಂದಾಲೋಚನೆಯಿಂದ ಸಹಾಯ ಮಾಡುವವರು ಇರುವರು…….

ಪಾಪ, ಪುಣ್ಯ – ಸ್ವರ್ಗ, ನರಕದ ನಂಬಿಕೆಯಿಂದ ಸಹಾಯ ಮಾಡುವವರು ಕೆಲವರು…..

ತಮ್ಮ ವಂಶದ ಅಥವಾ ಮನೆತನದ ಹೆಸರಿನ ಪ್ರತಿಷ್ಠೆಗಾಗಿ ಸಹಾಯ ಮಾಡುವವರು ಹಲವರು…..

ಸಮಾಜದಲ್ಲಿ ದಾನಿಗಳು ಎಂಬ ಹೆಸರು ಪಡೆಯಲು ಸಹಾಯ ಮಾಡುವವರು ಇದ್ದಾರೆ…..

ಪ್ರಚಾರ,ಪ್ರಶಸ್ತಿ ಮತ್ತು ಜನಪ್ರಿಯತೆಯ ಮೂಲ ಉದ್ದೇಶದಿಂದಲೇ ಸಹಾಯ ಮಾಡುವವರು ಇರುತ್ತಾರೆ….

ಭವಿಷ್ಯದ ಲಾಭದ ಆಸೆಯಿಂದ, ರಾಜಕೀಯ ಮುಂತಾದ ಅಧಿಕಾರ ದಾಹದಿಂದ ಸಹಾಯ ಮಾಡುವವರು ಕೆಲವರು….

ಬೇರೆಯವರ ಒತ್ತಡ ಅಥವಾ ಬಲವಂತಕ್ಕೆ ಸಹಾಯ ಮಾಡುವವರು ಇದ್ದಾರೆ…..

ವೈಯಕ್ತಿಕ ಲಾಭಕ್ಕಾಗಿ ಸಹಾಯ ರೂಪದ ನೆರವು ನೀಡುವವರು ಹಲವರು…

ಸಹಾಯ ಮಾಡುವುದನ್ನು ಹವ್ಯಾಸ ಮಾಡಿಕೊಂಡಿರುವವರು ಇರುತ್ತಾರೆ….

ಸಹಾಯ ಮಾಡುತ್ತಾ ಸಂಪಾದನೆ ಮಾಡಿಕೊಳ್ಳುವವರು ಇದ್ದಾರೆ….

ತೀರಾ ಕ್ಷುಲ್ಲಕ ಹತ್ತು ರೂಪಾಯಿ ಅಥವಾ ಎರಡು ಹಣ್ಣೋ, ಬಿಸ್ಕತ್ತೋ ಕೊಟ್ಟು ಸಣ್ಣ ಸಹಾಯವನ್ನು ದೊಡ್ಡದಾಗಿ ಹೇಳಿಕೊಂಡು ಮಹಾನ್ ದಾನಿಗಳಂತೆ ಮೆರೆಯುವವರು ಇದ್ದಾರೆ….

ತಮಗೆ ನಿರುಪಯುಕ್ತವಾದ ವಸ್ತುಗಳನ್ನು ಇತರರಿಗೆ ಕೊಟ್ಟು ಅದನ್ನು ಮಹಾ ಉಪಕಾರ ಎಂದು ಬಣ್ಣಿಸಿಕೊಳ್ಳುವವರು ಕೆಲವರು…..

ಬೇರೆಯವರು ಸಹಾಯ ಮಾಡುವಾಗ ತಾವು ಅದರಲ್ಲಿ ಭಾಗಿಯಾಗಿ ತಾವೇ ಮಾಡಿದಂತೆ ಹೇಳುವವರು ಅನೇಕರು….

ಏನೂ ಮಾಡದೆ ಕೇವಲ ಮಾತಿನಲ್ಲೇ ಮಹಾ ದಾನವಂತರಂತೆ ಹೇಳಿಕೊಳ್ಳುವವರು ಇದ್ದಾರೆ…

ಸಹಾಯದ ಸಂಧರ್ಭದಲ್ಲಿ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವವರು ಇದ್ದಾರೆ…

ತೆರಿಗೆ ತಪ್ಪಿಸಿಕೊಳ್ಳಲು ಆ ಹಣವನ್ನು ದಾನ ಮಾಡುವವರು ಇರುತ್ತಾರೆ…..

ಹೀಗೆ ಇನ್ನೂ ಅನೇಕ ರೀತಿಯ ಜನಗಳು ನಮ್ಮ ನಡುವೆ ಇದ್ದಾರೆ…

ಇದರಲ್ಲಿ ನಾವು ಯಾರು ಎಂಬುದು ಅವರವರ ಆತ್ಮಾವಲೋಕನಕ್ಕೆ ಸೇರಿದ್ದು………

ಹಾಗೆಯೇ ತಿಳಿವಳಿಕೆ ನಡವಳಿಕೆಯಾದಾಗ……

ಒಳ್ಳೆಯತನ ಉದಾಹರಣೆಯಾಗದೆ ಸಹಜವಾದಾಗ……..

ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು
ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ….

ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ…..

ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಮನೆಯವರು ಆತನ, ಎಲ್ಲಾ ಅಂಗಾಂಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುತ್ತಾರೆ….

ವಿಕಲ ಚೇತನ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ವಿದ್ಯಾವಂತ ಯುವಕನೊಬ್ಬ ಆಕೆಗೆ ಸುಂದರ ಬದುಕು ನೀಡುತ್ತಾನೆ…..

ಅಧಿಕಾರದ ಅನೇಕ ಹಂತಗಳನ್ನು ಅನುಭವಿಸಿಯೂ ರಾಜಕಾರಣಿಯೊಬ್ಬರು,
ಈಗಲೂ ಒಂದೇ ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ…..

ಆಡಳಿತದ ಅತ್ಯಂತ ಉನ್ನತ ಹುದ್ದೆಗೇರಿ ನಿವೃತ್ತರಾದ ಅಧಿಕಾರಿಯೊಬ್ಬರು ,
ಈಗಲೂ ಸರ್ಕಾರಿ ಬಸ್ಸುಗಳಲ್ಲೇ ಓಡಾಡುವ ಸರಳತೆ ಬೆಳೆಸಿಕೊಂಡಿದ್ದಾರೆ….

ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬ ತನ್ನ ಮಗಳ ಮದುವೆಯನ್ನು, ಬಹಳ ಸರಳವಾಗಿ ಮಂತ್ರ – ಮಾಂಗಲ್ಯದ ರೀತಿಯಲ್ಲಿ ಮಾಡಿದರು….

ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದ ಪತ್ರಕರ್ತರೊಬ್ಬರು,
ಈಗಲೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಿ ಸರಳತೆ ಅಳವಡಿಸಿಕೊಂಡಿದ್ದಾರೆ….

ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿಯೊಬ್ಬರು ,
ಪರೋಕ್ಷವಾಗಿಯೂ ಲಂಚ ಮುಟ್ಟದ ಶುದ್ಧ ಹಸ್ತರು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ….

ಇದೆಲ್ಲವೂ ಘಟಿಸಿರುವುದು, ಸಾಧ್ಯವಾಗಿರುವುದು ನಮ್ಮ ಈಗಿನ ಸಮಾಜದಲ್ಲಿಯೇ…..

ಆದರೆ ಯೋಚಿಸಬೇಕಾಗಿರುವುದು ಇವು ಕೇವಲ ಅಪರೂಪದ ಉದಾಹರಣೆಗಳು ಮಾತ್ರ.

ನಮ್ಮ ಆಶಯ ಬಹುತೇಕ ಸಮಾಜದ ಪ್ರತಿಕ್ರಿಯೆ ಇದೇ ಆಗಿರಬೇಕು.

ಇಡೀ ಸಮುದಾಯಗಳ ನಡೆ ನುಡಿ ಇದೇ ಆಗಿರಬೇಕು.

ಇಡೀ ಜನಗಳ ಮೂಲಭೂತ ಗುಣ ಇದೇ ಆಗಿರಬೇಕು.

ಇದಕ್ಕಾಗಿ ನೀವೇನು ಬೆವರು ಸುರಿಸಬೇಕಾಗಿಲ್ಲ,

ಇದಕ್ಕಾಗಿ ನೀವೇನು ಬೆಟ್ಟ ಹತ್ತಿ ಸಮುದ್ರ ದಾಟಬೇಕಾಗಿಲ್ಲ,

ಇದಕ್ಕಾಗಿ ನೀವೇನು ಬ್ರಹ್ಮವಿದ್ಯೆ ಕಲಿಯಬೇಕಾಗಿಲ್ಲ,

ಕೇವಲ ನಿಮ್ಮ ವ್ಯಕ್ತಿತ್ವವನ್ನು ಸ್ವಲ್ಪ ಮೇಲ್ದರ್ಜೆಗೆ ಏರಿಸಿಕೊಳ್ಳಿ.

ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಿ.

ಆಗ ಎಲ್ಲವೂ ಸಾಧ್ಯ.

ಕೇವಲ ಮಾತುಗಳು, ಭಾಷಣಗಳು, ಬರಹಗಳು, ಚಿಂತನೆಗಳಿಂದ ಮಾತ್ರ ಸಾಧ್ಯವಿಲ್ಲ.

ಬದುಕು ಈ ಎಲ್ಲವನ್ನೂ ಮೀರಿದ್ದು………….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…..
9844013068……

Related posts