ನಾಗಮಂಗಲದಲ್ಲಿ ಮನೆ ಕಳ್ಳತನ – ₹1.35 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವು.
ನಾಗಮಂಗಲದಲ್ಲಿ ಮನೆ ಕಳ್ಳತನ – ₹1.35 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವು
ನಗರದ ಪಡುವಲಪಟ್ಟಣ ರಸ್ತೆಯ ಯಲಮ್ಮ ದೇವಸ್ಥಾನ ಹತ್ತಿರದ ವಸತಿ ಏರಿಯಾದ ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು ₹1.35 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ಬೆಳಗಿನ ಜಾವ ಸಂಭವಿಸಿದೆ.
ದೂರು ನೀಡಿದವರು ಶ್ರೀಮತಿ ಸಾಯಿರಾಬಾನು (44 ವರ್ಷ), ಪತಿ ಲೇಟ್ ಸೈಯದ್ ಇಲಿಯಾಸ್. ಅವರು ನೀಡಿದ ಮಾಹಿತಿಯ ಪ್ರಕಾರ, ದಿನಾಂಕ 04-10-2025ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ತಾವು ಹಾಗೂ ಮಗಳು ನಾಜಿಯಾಬಾನು ಮೈಸೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಅವರು ರಾತ್ರಿ ವಾಪಸ್ ಬಂದು ಬೆಳಗಿನ ಜಾವ ಸುಮಾರು 1:45ಕ್ಕೆ ಮನೆ ತಲುಪಿದಾಗ ಕಳ್ಳತನವಾಗಿರುವುದು ಪತ್ತೆಯಾಗಿದೆ.
ಮನೆಯ ಮುಂಭಾಗದ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಒಡೆದು ಹಾಕಲಾಗಿದ್ದು, ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಬೀರುವಿನ ಬಾಗಿಲು ತೆರೆಯಲ್ಪಟ್ಟಿತ್ತು. ಬೀರುವಿನೊಳಗಿದ್ದ ಚಿನ್ನಾಭರಣಗಳು ಹಾಗೂ ನಗದು ಹಣ ಕಳವಾಗಿರುವುದು ಕಂಡುಬಂದಿದೆ.
ಕಳ್ಳತನಗೊಂಡ ವಸ್ತುಗಳ ವಿವರ ಈ ಕೆಳಗಿನಂತಿದೆ:
16.480 ಗ್ರಾಂ ತೂಕದ ಒಂದು ಜೋಡಿ ದೊಡ್ಡ ಕಿವಿಯೋಲೆ (ಹ್ಯಾಂಗಿಂಗ್ಸ್)
2.450 ಗ್ರಾಂ ತೂಕದ ಒಂದು ಉಂಗುರ
2.590 ಗ್ರಾಂ ತೂಕದ ಚಿಕ್ಕ ಕಿವಿಯೋಲೆ
ಒಟ್ಟು 21.500 ಗ್ರಾಂ ಚಿನ್ನಾಭರಣಗಳು (ಅಂದಾಜು ಮೌಲ್ಯ ₹85,000)
₹50,000 ನಗದು ಹಣ
ಜೊತೆಗೆ ಕೃತಕ ಆಭರಣಗಳು (Artificial ornaments)
ಒಟ್ಟು ಕಳ್ಳತನವಾದ ವಸ್ತುಗಳ ಮೌಲ್ಯ ಸುಮಾರು ₹1,35,000 ಎಂದು ಅಂದಾಜಿಸಲಾಗಿದೆ.
ಮನೆಯ ಮಾಲೀಕರಾದ ಡಾ. ಹಸನ್ ಅವರ ಪ್ರಕಾರ, ಘಟನೆಯ ಸಮಯದಲ್ಲಿ ಯಾರೋ ಶಂಕಾಸ್ಪದ ವ್ಯಕ್ತಿ ಮನೆಯ ಸುತ್ತಮುತ್ತ ಸಂಚರಿಸುತ್ತಿದ್ದನೆಂದು ತಿಳಿದುಬಂದಿದೆ.
ಈ ಸಂಬಂಧವಾಗಿ ನಾಗಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ಮಾಡಿದವರ ಪತ್ತೆಗಾಗಿ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ :
ಧನುಷ್ ಎ ಗೌಡ
ಕಾಚೇನಹಳ್ಳಿ
ತಾಲೂಕ್ ನ್ಯೂಸ್.

