ಸುದ್ದಿ 

ಐಪಿಎಲ್‌ ಮಾದರಿಯಲ್ಲಿ ಕಂಬಳ ಆಯೋಜನೆಗೆ ತಯಾರಿ.

Taluknewsmedia.com

ಐಪಿಎಲ್‌ ಮಾದರಿಯಲ್ಲಿ ಕಂಬಳ ಆಯೋಜನೆಗೆ ತಯಾರಿ.

ಕರ್ನಾಟಕ ಸರ್ಕಾರದಿಂದ ರಾಜ್ಯ ಕ್ರೀಡೆಯ ಮಾನ್ಯತೆ ಪಡೆದಿರುವ ಕರಾವಳಿಯ ಜನಪದ ಕ್ರೀಡೆ ಕಂಬಳ ಇದೀಗ ಜಾಗತಿಕ ಮೇಳೆಗೆ ಕಾಲಿಡಲು ಸಜ್ಜಾಗಿದೆ. ಐಪಿಎಲ್‌ (ಇಂಡಿಯನ್ ಪ್ರೀಮಿಯರ್ ಲೀಗ್) ಮಾದರಿಯಲ್ಲಿಯೇ ಅದ್ಧೂರಿಯಾಗಿ ಕಂಬಳ ಆಯೋಜನೆ ಮಾಡುವ ಯೋಜನೆ ರೂಪುಗೊಂಡಿದೆ. ಈ ನೂತನ ಪ್ರಯತ್ನದ ಹಿಂದಿರುವುದು ರಾಜ್ಯ ಕಂಬಳ ಅಸೋಸಿಯೇಷನ್‌, ಇದರ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಶನಿವಾರ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಸರ್ಕಾರದ ಅನುದಾನ ಅತ್ಯಲ್ಪ…

ಪ್ರಸಕ್ತ ಕರಾವಳಿಯಲ್ಲಿ ಪ್ರತಿ ವರ್ಷ ಸುಮಾರು 25 ಕಂಬಳಗಳು ನಡೆಯುತ್ತಿವೆ. ಆದರೆ ಸರ್ಕಾರದಿಂದ ಸಿಗುವ ಅನುದಾನ ತುಂಬಾ ಅಲ್ಪವಾಗಿದೆ. ಕಳೆದ ವರ್ಷ ₹5 ಲಕ್ಷ ನೀಡಿದ್ದರೆ, ಈ ಬಾರಿ ಕೇವಲ ₹2 ಲಕ್ಷಕ್ಕೆ ಸೀಮಿತವಾಗಿದೆ.

ಒಂದು ಕಂಬಳ ನಡೆಸಲು ₹25 ರಿಂದ ₹40 ಲಕ್ಷ ವೆಚ್ಚವಾಗುತ್ತದೆ. ಈ ಮೊತ್ತವನ್ನು ಹಳ್ಳಿಯ ಆಯೋಜಕರು ಭರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ, ಐಪಿಎಲ್ ಮಾದರಿಯಲ್ಲಿ ಬಿಡ್‌ (Bidding) ಪದ್ಧತಿಯನ್ನು ಅಳವಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಐಪಿಎಲ್‌ ಮಾದರಿ ಕಂಬಳ ಎಂದರೇನು?

ಮೊದಲ ಹಂತದಲ್ಲಿ ಪ್ರತಿಯೊಂದು ಕಂಬಳವನ್ನು ಒಂದೊಂದು ಕಂಪನಿಗಳಿಗೆ ವಹಿಸಲಾಗುವುದು. ಮುಂದಿನ ವರ್ಷದಿಂದ ಐಪಿಎಲ್‌ನಂತೆ ಬಿಡ್‌ ಮಾದರಿಯಲ್ಲಿ ಲೀಗ್‌ ಕಂಬಳ ಆಯೋಜನೆ ಮಾಡುವ ಉದ್ದೇಶವಿದೆ. ಅಂದರೆ, ಕಂಬಳದ ಸಂಪ್ರದಾಯದ ಶೈಲಿಯನ್ನು ಉಳಿಸಿಕೊಂಡು, ಅದನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಉದ್ಯಮ ಸಂಸ್ಥೆಗಳ ಪ್ರಾಯೋಜಕತ್ವ ಪಡೆಯುವುದು ಮುಖ್ಯ ಗುರಿಯಾಗಿದೆ.

ಪ್ರಾಯೋಜಕತ್ವಕ್ಕೆ ಆದ್ಯತೆ..

ಆರಂಭದಲ್ಲಿ ಕರಾವಳಿಯ ಉದ್ಯಮ ಸಂಸ್ಥೆಗಳಿಗೆ ಪ್ರಾಯೋಜಕತ್ವ ವಹಿಸಲು ಅವಕಾಶ ನೀಡಲಾಗುತ್ತದೆ. ನಂತರ ಮುಂಬೈ, ಬೆಂಗಳೂರು, ದೆಹಲಿ ಮುಂತಾದ ಮೆಟ್ರೋ ನಗರಗಳ ಕಂಪನಿಗಳನ್ನೂ ಆಹ್ವಾನಿಸಲಾಗುವುದು.
ಕಂಬಳ ಎಂದರೆ ಕೇವಲ ಕೋಣಗಳ ಓಟವಲ್ಲ — ಅವುಗಳನ್ನು ಸಾಕುವವರು, ಓಡಿಸುವವರು, ತೀರ್ಪುಗಾರರು, ಆಯೋಜಕರು ಎಲ್ಲರೂ ಇದರ ಅಂಗಾಂಗಗಳು. ಈ ಎಲ್ಲರಿಗೂ ಸವಲತ್ತು ಸಿಗಬೇಕೆಂಬ ಆಶಯ ಅಸೋಸಿಯೇಷನ್‌ನದು.

ಅನುದಾನ ಹೆಚ್ಚಳದ ಬೇಡಿಕೆ…

ಕಂಬಳಕ್ಕೆ ಪ್ರತಿ ವರ್ಷ ₹2 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದರಿಂದ ಪ್ರತಿ ಕಂಬಳಕ್ಕೂ ₹8 ಲಕ್ಷ ರೂ. ಸಿಗುವಂತಾಗಲಿದೆ. ಜೊತೆಗೆ, ಕಂಬಳ ಕಾರ್ಮಿಕರಿಗೆ ಇತರ ಕಾರ್ಮಿಕರಂತೆ ಇಲಾಖೆಯಿಂದ ಸವಲತ್ತು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಅ.15ರಂದು ಮಹತ್ವದ ಸಭೆ..

ಐಪಿಎಲ್ ಮಾದರಿಯ ಕಂಬಳ ಆಯೋಜನೆಗೆ ಸಂಬಂಧಿಸಿದ ಅಂತಿಮ ರೂಪುರೇಷೆಗಳನ್ನು ಅಕ್ಟೋಬರ್‌ 15ರಂದು ಮೂಡುಬಿದಿರೆಯಲ್ಲಿ ನಡೆಯುವ ರಾಜ್ಯ ಕಂಬಳ ಅಸೋಸಿಯೇಷನ್‌ನ ಪ್ರಥಮ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಡಾ. ಶೆಟ್ಟಿ ತಿಳಿಸಿದ್ದಾರೆ.

“ಐಪಿಎಲ್ ಮಾದರಿಯಲ್ಲಿ ಕಂಬಳಕ್ಕೆ ಕಂಪನಿಗಳ ಬಿಡ್ ಆಹ್ವಾನಿಸಿದರೂ, ಕಂಬಳ ಕ್ರೀಡೆಯ ಸಂಪ್ರದಾಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನಮ್ಮ ಉದ್ದೇಶ ಕಂಬಳದ ಸಾಂಸ್ಕೃತಿಕ ಗೌರವವನ್ನು ಉಳಿಸಿಕೊಂಡು ಅದನ್ನು ಜಾಗತಿಕ ವೇದಿಕೆಗೆ ಏರಿಸುವುದು.”

— ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ರಾಜ್ಯ ಕಂಬಳ ಅಸೋಸಿಯೇಷನ್

Related posts