ತಾಲಿಬಾನ್ ಮಂತ್ರಿಯ ಆದೇಶ…….
ತಾಲಿಬಾನ್ ಮಂತ್ರಿಯ ಆದೇಶ…….
ಮಾನ್ಯ ಪ್ರಧಾನಿಗಳೇ ಇದಕ್ಕೆ ನಿಮ್ಮ ಟ್ವೀಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಸಿಗಬಹುದೇ….
ಮೂಲಭೂತವಾದ ಎಂಬ ಶ್ರೇಷ್ಠತೆಯ ವ್ಯಸನ ಎಲ್ಲಿಗೆ ಬಂದು ನಿಂತಿದೆ ಎಂದರೆ, ಭಾರತ ಸರ್ಕಾರ ಮತ್ತು ಬಹುತೇಕ ಜನರಿಂದ
” ಭಯೋತ್ಪಾದಕರು ” ಎಂದು ಕರೆಯಲ್ಪಡುತ್ತಿದ್ದ ತಾಲಿಬಾನ್ ಎಂಬ ಸಂಘಟನೆ ಆಫ್ಘಾನಿಸ್ತಾನದಲ್ಲಿ ಆಡಳಿತ ಮಾಡುತ್ತಿರುವಾಗ, ಅದರ ಜೊತೆಗೆ ಸ್ನೇಹ ಬೆಳೆಸಿಕೊಂಡು ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಸಿದ್ಧಾಂತಕ್ಕೆ ಬಲಿಯಾಗಿ, ಆ ತಾಲಿಬಾನಿ ಸರ್ಕಾರದ ಮಂತ್ರಿಯೊಬ್ಬ ನಮ್ಮದೇ ಸರ್ಕಾರದ ಆಹ್ವಾನದ ಮೇರೆಗೆ ಭಾರತಕ್ಕೆ ಬಂದು, ಪತ್ರಿಕಾಗೋಷ್ಠಿ ನಡೆಸುವಾಗ, ಅಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿ ತಾನು ಪತ್ರಿಕಾಗೋಷ್ಠಿ ನಡೆಸುವ ಹಂತಕ್ಕೆ ಬಂದುಬಿಡುತ್ತದೆ…..
ಛೇ ಛೇ ಛೇ…….
ತೀರಾ ಅನ್ಯಾಯ, ಅಸಹಾಯಕ ಮತ್ತು ನಾಚಿಕೆಗೇಡಿನ ಸಂಗತಿ…..
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದ ಯಾವ ನಾಗರಿಕ ಮನುಷ್ಯನು ಸಹ ಅಲ್ಲೊಂದು ಸರ್ಕಾರವಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅದೊಂದು ಭಯೋತ್ಪಾದಕರ, ಸರ್ವಾಧಿಕಾರಿಗಳ, ಮತಾಂಧರ ಅನಾಗರಿಕ ಆಡಳಿತ. ಅಧಿಕಾರ ಹಿಡಿಯುವಾಗ ಅವರು ಸ್ವಾತಂತ್ರ್ಯ ಯೋಧರೋ, ಭಯೋತ್ಪಾದಕರೋ ಏನೇ ಆಗಿರಲಿ, ಆದರೆ ಒಮ್ಮೆ ಅಧಿಕಾರ ದೊರೆತ ನಂತರ ಕನಿಷ್ಠ ನಾಗರಿಕ ಆಡಳಿತ ನಡೆಸಬೇಕಲ್ಲವೇ……
ಮಹಿಳೆಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿರುವುದು ಮಾತ್ರವಲ್ಲ, ಸಾರ್ವಜನಿಕವಾಗಿ ಅವರ ಸಹಜ ಓಡಾಟವನ್ನೇ ನಿಯಂತ್ರಿಸುವ ಮಟ್ಟಕ್ಕೆ, ಅವರು ಸಾರ್ವಜನಿಕವಾಗಿ ಕಾಣದಂತೆ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚುವ ಹಂತಕ್ಕೆ, ಅದೂ ಬುರ್ಖಾ ಹಾಕಿಕೊಂಡ ನಂತರವೂ ಇಷ್ಟೊಂದು ಕಠಿಣ ನಿಯಮಗಳನ್ನು ಅನುಸರಿಸಿ, ಮಹಿಳೆ ಎಂದರೆ ಭೋಗದ ವಸ್ತು ಎನ್ನುವ ರೀತಿಯಲ್ಲಿ ಅವರನ್ನು ಪಶುಗಳಂತೆ ಕಾಣುವ, ರಸ್ತೆಯಲ್ಲಿ ಕಲ್ಲು ಹೊಡೆಯುವ ಸರ್ಕಾರದ ಮಂತ್ರಿಯನ್ನು ನಾವು ಆಹ್ವಾನಿಸುವುದು ಎಷ್ಟರಮಟ್ಟಿಗೆ ಸರಿ…..
” ಬೇಟಿ ಪಡಾವೋ ಬೇಟಿ
ಬಚಾವೋ ” ಎಂದು ಭಾರತ ರೂಪಿಸಿರುವ ನಿಯಮಗಳ ಬಗ್ಗೆ ಆ ತಾಲಿಬಾನ್ ಸಚಿವರಿಗೆ ಯಾರು ಮಾಹಿತಿ ನೀಡಲಿಲ್ಲವೇ. ಭಾರತವೆಂಬುದು ಮಹಿಳಾ ಸ್ವಾತಂತ್ರ್ಯದ, ಮಹಿಳಾ ಸಮಾನತೆಯ, ಮಹಿಳಾ ಪೂಜ್ಯತೆಯ ದೇಶ ಎಂಬುದನ್ನು ಆ ತಾಲಿಬಾನ್ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾದ ಸರ್ಕಾರ ಆತನ ಚಿಂತನೆಗೆ ಒಗ್ಗಿಕೊಂಡಿದ್ದು ಮತಾಂಧತೆಯ ನಿಜ ಮುಖದ ಬಯಲಾಗುವಿಕೆಯಾಗಿದೆ.
ಮೇಲ್ನೋಟದ ಮಾತುಗಳಿಗೂ ತಾವು ಬದುಕುತ್ತಿರುವ ರೀತಿಗೂ ಒಂದಕ್ಕೊಂದು ಸಂಬಂಧವಿಲ್ಲದ ಮನಸ್ಥಿತಿ ಇದ್ದರೆ ಅದರ ಪರಿಣಾಮವಾಗುವುದು ಹೀಗೆಯೇ.
ಪಾಕಿಸ್ತಾನ ನಮ್ಮ ಶತ್ರು ದೇಶವಾಗಿದೆ. ಅದರ ಮತ್ತೊಂದು ಶತ್ರುದೇಶ ಮತ್ತು ಅದಕ್ಕಿಂತಲೂ ಆನಾಗರಿಕ ಆಡಳಿತ ನಡೆಸುತ್ತಿರುವ, ಭಾರತದ ಸರ್ವನಾಶಕ್ಕೆ ಒಮ್ಮೆ ಪಣತೊಟ್ಟಿದ್ದ ತಾಲಿಬಾನ್ ಆಡಳಿತವಿರುವ ಆಫ್ಘಾನಿಸ್ತಾನದೊಂದಿಗೆ ನಾವು ಮಿತ್ರತ್ವ ಸಾಧಿಸುವುದು ಆಧುನಿಕ ಅಂತರರಾಷ್ಟ್ರೀಯ ರಾಜಕೀಯದ ತಂತ್ರಗಾರಿಕೆ ಎನ್ನಬಹುದೇ…..
ಆ ತಾಲಿಬಾನ್ ಸಚಿವರಿಗೆ ಭಾರತದ ಪ್ರಧಾನ ಮಂತ್ರಿಗಳು ಅಥವಾ ವಿದೇಶಾಂಗ ಮಂತ್ರಿಗಳು ಅಥವಾ ಹಣಕಾಸು ಮಂತ್ರಿಗಳು ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಗಳು ಹೇಳಬೇಕಿತ್ತು
” ಮಾನ್ಯ ತಾಲಿಬಾನ್ ಸಚಿವರೇ, ಹೆಣ್ಣೆಂದರೆ ಅದು ನಿನಗೆ ಜನ್ಮ ನೀಡುವ ತಾಯಿ, ಹೆಣ್ಣೆಂದರೆ ಅದು ನಿನಗೆ ಅರ್ಧಾಂಗಿಯಾಗುವ ಜೀವ, ಹೆಣ್ಣೆಂದರೆ ನಿನ್ನ ತಂಗಿ ಮತ್ತು ನಿನ್ನ ಮಗಳು, ಹೆಣ್ಣೆಂದರೆ ಈ ಜಗತ್ತಿನ ಮುಂದುವರಿಕೆಯ ಮತ್ತು ಸಂತಾನವೃದ್ಧಿಯ ಪ್ರಮುಖ ಜೀವ. ಅವರನ್ನೇ ನೀವು ನಿಯಂತ್ರಣಕ್ಕೊಳಪಡಿಸಿ ಅವರ ಮೇಲೆಯೇ ದೌರ್ಜನ್ಯ ಮಾಡಿ ಆಡಳಿತ ನಡೆಸುವುದು ಧರ್ಮಕ್ಕೂ, ಮಾನವ ಸಮಾಜಕ್ಕೂ ಮಾಡುವ ದ್ರೋಹ.
ಹೆಣ್ಣೇನು ವಿಚಿತ್ರ ಪಶುವಲ್ಲ, ಆಕೆಯೂ ಗಂಡಿನಂತೆ ಸೃಷ್ಟಿಯ ಒಂದು ಜೀವ. ಅದು ಆಕೆಯ ಆಯ್ಕೆಯೂ ಅಲ್ಲ. ಆಕೆಗೆ ಸಮಾನತೆ ನೀಡಿ, ಶಿಕ್ಷಣ ನೀಡಿ, ಉದ್ಯೋಗ ನೀಡಿ, ಆಕೆಗೆ ಇರುವ ಜೀವನವನ್ನು ಅನುಭವಿಸಲು ಅವಕಾಶ ಕೊಡದಿದ್ದಮೇಲೆ ಆಕೆಯ ಜೀವನಕ್ಕೆ ಅರ್ಥವಿದೆಯೇ, ಆಕೆಯ ಬದುಕಿಗೆ ಅರ್ಥವಿದೆಯೇ, ಇನ್ನೊಬ್ಬರ ಗುಲಾಮರಾಗಿ ದುಡಿಯಲು ಸುಮಾರು 80 ವರ್ಷಗಳ ಜೀವನವನ್ನು ಹಿಂಸಾತ್ಮಕವಾಗಿ ಕಳೆಯಬೇಕೆ.
ಹೆಣ್ಣೇನು ನಿಮ್ಮ ಪ್ರತಿಸ್ಪರ್ಧಿಯೂ ಅಲ್ಲ, ವಿರೋಧಿಯು ಅಲ್ಲ. ಹೆಣ್ಣು ನಮ್ಮ ಒಡನಾಡಿ “……
ಅದನ್ನು ಮಾನ್ಯ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾದ ಸರ್ಕಾರ ಮತ್ತೆ ತನ್ನ ನಿಜ ಆಶಯದ ಮೂಲಭೂತವಾದ ಬಯಲುಗೊಳಿಸಿದೆ. ಧರ್ಮ, ದೇವರು, ರಾಷ್ಟ್ರೀಯತೆ, ದೇಶಭಕ್ತಿ, ಅಭಿವೃದ್ಧಿ ಎಂಬ ಭಾವನಾತ್ಮಕ ವಿಷಯಗಳನ್ನು ಮುಂದೊಡ್ಡಿ ಜನರ ಮಾನಸಿಕತೆಯನ್ನು ಭ್ರಷ್ಟಗೊಳಿಸಿ, ಆ ಮೂಲಕ ಮತ್ತೆ ಹೆಣ್ಣಿನ ಸ್ವಾತಂತ್ರ್ಯವನ್ನೇ ಅಪಹರಣಗೊಳಿಸುವ ಮೂಲವಾದಿತನದ ಕುತಂತ್ರ ಇದೇ ಆಗಿದೆ.
ಇದನ್ನು ಪ್ರತಿಯೊಬ್ಬರು ಖಂಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆ ಪತ್ರಿಕಾಗೋಷ್ಠಿಯನ್ನು ಮಾಧ್ಯಮ ರಂಗ ಬಹಿಷ್ಕರಿಸಿ ಆ ಮಂತ್ರಿಯನ್ನು ವಾಪಸ್ಸು ಕಳಿಸಬೇಕಾಗಿತ್ತು. ಅದು ಏನಾಯಿತೋ ನನಗೆ ಮಾಹಿತಿ ಸಿಗಲಿಲ್ಲ. ಈ ಆಧುನಿಕ ಕಾಲದಲ್ಲಿ ಮಹಿಳೆಯನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಡುವುದು ಅತ್ಯಂತ ಹೇಡಿತನದ, ವಿಕೃತ ಮನಸ್ಥಿತಿ. ಅದನ್ನು ಭಾರತ ಎಂದಿಗೂ ಸಹಿಸಬಾರದು.
ವ್ಯಾವಹಾರಿಕವಾಗಿ ಆಫ್ಘಾನಿಸ್ತಾನದೊಂದಿಗೆ ಅನಿವಾರ್ಯ ಸ್ನೇಹ ಮಾಡಬೇಕಾಗಿರಬಹುದು, ಅದನ್ನು ಒಪ್ಪಿಕೊಳ್ಳೋಣ. ಆದರೆ ಈ ರೀತಿಯ ಅನಾಗರಿಕ ಮಹಿಳಾ ದೌರ್ಜನ್ಯವನ್ನು ಎಂದಿಗೂ ಸಹಿಸಬಾರದು ಮಾನ್ಯ ಪ್ರಧಾನ ಮಂತ್ರಿಗಳೇ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

