ಸುದ್ದಿ 

ಮುಡಾ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅಮಾನತು — ಕರ್ತವ್ಯ ಲೋಪ ಸಾಬೀತು!RTI ಕಾರ್ಯಕರ್ತ ನಾಗೇಂದ್ರ ದೂರು ಆಧಾರದಲ್ಲಿ ಸರ್ಕಾರದ ಕ್ರಮ

Taluknewsmedia.com

ಮುಡಾ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅಮಾನತು — ಕರ್ತವ್ಯ ಲೋಪ ಸಾಬೀತು!
RTI ಕಾರ್ಯಕರ್ತ ನಾಗೇಂದ್ರ ದೂರು ಆಧಾರದಲ್ಲಿ ಸರ್ಕಾರದ ಕ್ರಮ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ರವರನ್ನು ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತೆ ಲತಾ ರವರ ನಿರ್ದೇಶನದ ಮೇರೆಗೆ ಮುಡಾ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ರವರು ದಾಖಲಾತಿಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮೈಸೂರಿನ ಗೋಕುಲಂ 3ನೇ ಹಂತದ ಮನೆ ಸಂಖ್ಯೆ 867ಕ್ಕೆ 1982ರಲ್ಲಿ ಲಿಲಿಯನ್ ಶಾರದಾ ಜೋಸೆಫ್ ಅವರಿಗೆ 30×40 ಗಾತ್ರದ ನಿವೇಶನ ಮಂಜೂರಾಗಿತ್ತು. ಅವರು 1983ರಲ್ಲಿ ನಿಧನ ಹೊಂದಿದ್ದರೂ, ಆ ಸ್ವತ್ತು ದೀರ್ಘಕಾಲ ಯಾರ ಹೆಸರಿಗೆ ವರ್ಗವಾಗಿರಲಿಲ್ಲ. ಆದರೆ 2024ರ ಮಾರ್ಚ್ 26ರಂದು ಕ್ರಮಬದ್ದ ವಾರಸುದಾರರಲ್ಲದ ನೆವಿಲ್ ಮಾರ್ಕಸ್ ಜೋಸೆಫ್ ಅವರ ಹೆಸರಿಗೆ ಪೌತಿಖಾತೆ ವರ್ಗಾವಣೆ ಮಾಡಿ ಹಕ್ಕುಪತ್ರ ನೀಡಲಾಗಿದೆ ಎಂಬುದು ದಾಖಲೆಗಳಲ್ಲಿ ಪತ್ತೆಯಾಗಿದೆ.

ಈ ಪ್ರಕರಣದ ತನಿಖೆಯಲ್ಲಿ, ತಹಸೀಲ್ದಾರ್ ಕೆ.ವಿ. ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮಸುಂದ್ರು ಅವರು ನಿಯಮ ಮೀರಿ ಕ್ರಯಪತ್ರ ತಿದ್ದುಪಡಿ ಮಾಡಿ ಅಕ್ರಮವಾಗಿ ಮಂಜೂರಾತಿ ನೀಡಿರುವುದು ಬಹಿರಂಗವಾಗಿದೆ. ಕ್ರಯಪತ್ರ ಅನುಮೋದನೆ ಕಾರ್ಯದರ್ಶಿಯವರಿಗೆ ಮಾತ್ರ ಅಧಿಕಾರವಾಗಿದ್ದರೂ, ಅವರು ಕಡತ ಮಂಡಿಸದೆ ನೇರವಾಗಿ ತೀರ್ಮಾನ ಕೈಗೊಂಡಿರುವುದು ಅಧಿಕಾರ ದುರುಪಯೋಗದ ಸ್ಪಷ್ಟ ನಿದರ್ಶನವಾಗಿದೆ.

ಈಗಾಗಲೇ ವ್ಯವಸ್ಥಾಪಕ ಸೋಮಸುಂದ್ರು ಅಮಾನತಿನಲ್ಲಿದ್ದು, ಇದೀಗ ರಾಜಶೇಖರ್ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿದೆ. ಮುಡಾ ಕಾರ್ಯದರ್ಶಿಗಳು ಅಕ್ರಮ ನಡೆದಿರುವುದಾಗಿ ನೀಡಿದ ವರದಿ ಆಧಾರದಲ್ಲಿ ನಗರಾಭಿವೃದ್ಧಿ ಇಲಾಖೆ ಅಂತಿಮ ಆದೇಶ ಹೊರಡಿಸಿದೆ.

Related posts