ಮಗನ ಮೇಲೆ ಗುಂಡು ಹಾರಿಸಿದ ತಂದೆ – ಒಂದು ಕಣ್ಣು ಕಳೆದುಕೊಂಡ ಮಗ!
ಮಗನ ಮೇಲೆ ಗುಂಡು ಹಾರಿಸಿದ ತಂದೆ – ಒಂದು ಕಣ್ಣು ಕಳೆದುಕೊಂಡ ಮಗ!
ದೊಡ್ಡಬಳ್ಳಾಪುರ : ಕುಡಿದ ಮತ್ತಿನಲ್ಲಿ ತಂದೆ-ಮಗನ ಮಧ್ಯೆ ನಡೆದ ಗಲಾಟೆ ಭೀಕರ ರೂಪ ಪಡೆದಿದ್ದು, ತಂದೆಯೇ ಮಗನ ಮೇಲೆ ಗುಂಡು ಹಾರಿಸಿದ ಘಟನೆ ಬೆಳಕಿಗೆ ಬಂದಿದೆ.
ಮರಳೇನಹಳ್ಳಿ ಗ್ರಾಮದಲ್ಲಿ ಇಂದು ತಡರಾತ್ರಿ 2 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಡಬ್ಬಲ್ ಬ್ಯಾರೆಲ್ ಬಂದೂಕಿನಿಂದ ತನ್ನ ಮಗನ ತಲೆಗೆ ಗುಂಡು ಹಾರಿಸಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡೇಟಿನಿಂದ ಮಗ ಹರೀಶ್ (28) ಗಂಭೀರವಾಗಿ ಗಾಯಗೊಂಡು, ಒಂದು ಕಣ್ಣು ಕಳೆದುಕೊಂಡಿದ್ದಾರೆ. ಗಾಯಾಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆ ಸುರೇಶ್ (49) ಘಟನೆಯ ಆರೋಪಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಕುಡಿತದ ನಶೆಯಲ್ಲಿ ತಂದೆ ಮತ್ತು ಮಗನ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ನಡುವೆಯೇ ಮತ್ತೊಮ್ಮೆ ಉಂಟಾದ ಗಲಾಟೆಯಲ್ಲಿ ಕೋಪಗೊಂಡ ತಂದೆ ಬಂದೂಕು ಹಿಡಿದು ಗುಂಡು ಹಾರಿಸಿದನೆಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

