ಸುದ್ದಿ 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ – ನಾಲ್ವರು ಸ್ಥಳದಲ್ಲೇ ಸಾವು

Taluknewsmedia.com

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ – ನಾಲ್ವರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಬುರುಡುಗುಂಟೆ ಬಳಿ ಬೈಕ್ ಹಾಗೂ ಖಾಸಗಿ ಶಾಲಾ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ.

ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇಬ್ಬರು ಪುರುಷರು ಮತ್ತು ಮೂವರು ಮಕ್ಕಳು ಸವಾರಿಯಾಗಿದ್ದ ಬೈಕ್, ಎದುರಿನಿಂದ ಬಂದ ಶಾಲಾ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಬಾಲಾಜಿ (34), ವೆಂಕಟೇಶಪ್ಪ (50), ಹರೀಶ್ (12) ಮತ್ತು ಆರ್ಯ (3) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಂದು ಮಗು ತೀವ್ರವಾಗಿ ಗಾಯಗೊಂಡಿದೆ. ಗಾಯಾಳುವಿಗೆ ಬುರುಡುಗುಂಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಮೃತರು ಚಿಂತಾಮಣಿ ತಾಲ್ಲೂಕಿನ ತಾಡಿಗೊಳ್ಳು ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಸ್ಥಳೀಯರು ಹೇಳುವ ಪ್ರಕಾರ, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ತಲುಪದಿರುವುದು ಮೃತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಬುರುಡುಗುಂಟೆ ಮತ್ತು ದಿಬ್ಬೂರಹಳ್ಳಿ ಪ್ರದೇಶಗಳಲ್ಲಿ ಆ್ಯಂಬುಲೆನ್ಸ್ ಸೌಲಭ್ಯಗಳ ಕೊರತೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿರಂತರವಾಗಿ ಕಷ್ಟ ಅನುಭವಿಸುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

Related posts