ಹರಳೂರು ಕೆರೆಯಲ್ಲಿ ವೃದ್ಧೆ ಆತ್ಮಹತ್ಯೆ: ಅನಾರೋಗ್ಯದಿಂದ ಬೇಸತ್ತ ಮಹಿಳೆಯ ದಾರುಣ ಅಂತ್ಯ
ಹರಳೂರು ಕೆರೆಯಲ್ಲಿ ವೃದ್ಧೆ ಆತ್ಮಹತ್ಯೆ: ಅನಾರೋಗ್ಯದಿಂದ ಬೇಸತ್ತ ಮಹಿಳೆಯ ದಾರುಣ ಅಂತ್ಯ
ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಹರಳೂರು ಕೆರೆಯಲ್ಲಿ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಜಾರ್ಖಂಡ್ನ ರಾಂಚಿ ಮೂಲದ ರಾಣಿ ಸಿನ್ಹಾ (68) ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ಅಜಿತ್ ಕುಮಾರ್ ಸಿನ್ಹಾ ಜೊತೆ ಹೂಸ್ಕೂರಿನ ಚೂಡಸಂದ್ರ ಗ್ರಾಮದಲ್ಲಿ ವಾಸಿಸುತ್ತಿದ್ದರು. ಕಳೆದ 7 ವರ್ಷಗಳಿಂದ ಬೆಂಗಳೂರು ನಗರದಲ್ಲಿ ನೆಲೆಸಿದ್ದ ದಂಪತಿ, ಕಳೆದ ಎರಡು ವರ್ಷಗಳಿಂದ ರಾಣಿ ಸಿನ್ಹಾ ಅನಾರೋಗ್ಯಕ್ಕೆ ತುತ್ತಾಗಿದ್ದರು ಎನ್ನಲಾಗಿದೆ.
ಅನಾರೋಗ್ಯದಿಂದಾಗಿ ಅವರು ನಗರದ ಓಲ್ಡ್ ಏರ್ಪೋರ್ಟ್ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಡಯಾಲಿಸಿಸ್ ಚಿಕಿತ್ಸೆ ನೀಡಲು ಸೂಚಿಸಿದ್ದರಿಂದ ಹೆದರಿ, ಅಕ್ಟೋಬರ್ 23ರಂದು ಮಧ್ಯಾಹ್ನ ಮನೆ ತೊರೆದಿದ್ದರು.
ಅದೇ ದಿನ ಸಂಜೆ 6 ಗಂಟೆ ಸುಮಾರಿಗೆ ಹರಳೂರು ಕೆರೆಯಲ್ಲಿ ಅವರ ಶವ ಪತ್ತೆಯಾಯಿತು. ಸ್ಥಳಕ್ಕೆ ಪೊಲೀಸರು ಧಾವಿಸಿ ಶವವನ್ನು ಕೆರೆಯಿಂದ ಹೊರತೆಗೆಯಲಾಯಿತು. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

