ಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
ಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರಿಬ್ಬರನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹32 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಪೊಲೀಸ್ ಲೇಔಟ್ ಪ್ರದೇಶದ ನಿವಾಸಿ ಚೈತ್ರಾ ಅವರ ಮನೆಯಲ್ಲಿ ಜೂನ್ 18ರಿಂದ 20ರ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಮನೆ ಖಾಲಿಯಾಗಿದ್ದ ವೇಳೆ ಬೀಗ ಮುರಿದು ಒಳನುಗ್ಗಿ ಕಳ್ಳರು 495 ಗ್ರಾಂ ಚಿನ್ನದಾಭರಣ, 1 ಕೆಜಿ 10 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ₹75,000 ನಗದು ಕದ್ದೊಯ್ದಿದ್ದರು.
ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿ, ಚಡ್ಡಿ ಗ್ಯಾಂಗ್ನ ಇಬ್ಬರು ಸದಸ್ಯರನ್ನು ಬಂಧಿಸಿದರು. ಬಂಧಿತರಿಂದ 170 ಗ್ರಾಂ ಚಿನ್ನದ ಗಟ್ಟಿ, 50 ಗ್ರಾಂ ಚಿನ್ನದ ತುಂಡು, 28 ಗ್ರಾಂ ಮಾಂಗಲ್ಯ ಸರ, 4 ಗ್ರಾಂ ಚೈನ್, 250 ಗ್ರಾಂ ಬೆಳ್ಳಿ ವಸ್ತು ಹಾಗೂ ₹26,000 ನಗದು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ಗ್ಯಾಂಗ್ ಸದಸ್ಯರು ಚಿಕ್ಕಮಗಳೂರಿನ ಹೊರತಾಗಿ ಚಿತ್ರದುರ್ಗ, ಬಳ್ಳಾರಿ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಹ ಕಳ್ಳತನ ನಡೆಸಿದ್ದಾರೆ. ಇದೀಗ ಬಂಧಿತರಿಂದ ಮಾಹಿತಿ ಪಡೆದು ಉಳಿದ ನಾಲ್ವರು ತಲೆಮರೆಸಿಕೊಂಡಿರುವ ಸದಸ್ಯರಿಗಾಗಿ ಹುಡುಕಾಟ ಮುಂದುವರಿಸಲಾಗಿದೆ.
ನಗರ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಗ್ಯಾಂಗ್ನಿಬ್ಬರನ್ನು ಅರೆಸ್ಟ್ ಮಾಡಿದೆ.

