ಭಾರತೀಕರಣ………..
ಭಾರತೀಕರಣ………..
ಇಸ್ಲಾಮೀಕರಣ, ಕೇಸರೀಕರಣ ಎಂಬ ಎರಡು ಸಂಘರ್ಷಗಳ ಪ್ರಸ್ತುತ ಧಾರ್ಮಿಕ, ಸಾಮಾಜಿಕ ಸನ್ನಿವೇಶಗಳಲ್ಲಿ ಭಾರತೀಕರಣ ಎಂಬ ಪರಿಹಾರ ಹೆಚ್ಚು ಸೂಕ್ತವಾದದ್ದು ಮತ್ತು ದೇಶದ ಸಮಗ್ರತೆಯನ್ನು ಕಾಪಾಡಲು ಅತ್ಯವಶ್ಯವಾದದ್ದು. ಭಾರತೀಕರಣವೆಂದರೆ ಸಂವಿಧಾನದ ಶೀರ್ಷಿಕೆಯ ಪ್ರಾರಂಭದಲ್ಲಿ ಹೇಳಿರುವ ” ಭಾರತೀಯರಾದ ನಾವು……” ಎನ್ನುವ ಘೋಷ ವಾಕ್ಯ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಎಂಬ ಸಂಘಟನೆ ವಾಸ್ತವದಲ್ಲಿ ಏನು ಮತ್ತು ಅದು ನಿಜಕ್ಕೂ ದೇಶದ ಸಮಗ್ರ ಹಿತಾಸಕ್ತಿಯನ್ನು ಬಯಸುವುದಾದರೆ ಏನು ಮಾಡಬಹುದು ಎಂಬ ಚರ್ಚೆಯ ಸುತ್ತ ಒಂದು ಪಕ್ಷಿ ನೋಟ……..
ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆಯೇ : ಹೌದು,
ಆರ್ ಎಸ್ ಎಸ್ ಹಿಂದುತ್ವದ ಸಂಘಟನೆಯೇ : ಹೌದು,
ಆರ್ ಎಸ್ ಎಸ್ ಸನಾತನ ಧರ್ಮದ ಸಂಘಟನೆಯೇ : ಹೌದು,
ಆರ್ ಎಸ್ ಎಸ್ ವರ್ಣಾಶ್ರಮ ವ್ಯವಸ್ಥೆಯನ್ನು ಬೆಂಬಲಿಸುತ್ತದೆಯೇ : ಹೌದು, ಈಗ ಮೇಲ್ನೋಟಕ್ಕೆ ಅದನ್ನು ವಿರೋಧಿಸುತ್ತದೆ,
ಆರ್ ಎಸ್ ಎಸ್ ಬ್ರಾಹ್ಮಣ್ಯದ ಸಂಘಟನೆಯೇ : ಹೌದು, ಮೇಲ್ನೋಟಕ್ಕೆ ಅದನ್ನು ವಿರೋಧಿಸುತ್ತದೆ. ಆಂತರ್ಯದಲ್ಲಿ ಪುರೋಹಿತಶಾಹಿ ಮನೋಭಾವ ಹೊಂದಿದೆ,
ಆರ್ ಎಸ್ ಎಸ್ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತದೆಯೇ : ಹೌದು,
ಆರ್ ಎಸ್ ಎಸ್ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಇತರ ಪ್ರಾದೇಶಿಕ ಪಕ್ಷಗಳನ್ನು ವಿರೋಧಿಸುತ್ತದೆಯೇ : ಬಹುತೇಕ ಹೌದು,
ಆರ್ ಎಸ್ ಎಸ್ ನ ಮೂಲ ಸಿದ್ದಾಂತಕ್ಕೂ, ಆಚರಣೆಗೂ ವ್ಯತ್ಯಾಸವಿದೆಯೇ : ಹೌದು,
ಆರ್‌ಎಸ್ಎಸ್ ಒಂದು ಶಿಸ್ತಿನ ಸ್ವಯಂ ಸೇವಾ ಸಂಸ್ಥೆಯೇ : ಹೌದು,
ಆರ್ ಎಸ್ ಎಸ್ ಅತ್ಯಂತ ನಿಸ್ವಾರ್ಥ ಕಾರ್ಯಕರ್ತರ ಪಡೆ ಹೊಂದಿದೆಯೇ : ಹೌದು,
ಆರ್ ಎಸ್ ಎಸ್ ಗೆ ದೇಶ ಮತ್ತು ಧರ್ಮದ ಆಯ್ಕೆಯಲ್ಲಿ ಯಾವುದು ಮುಖ್ಯ : ಆಂತರಿಕವಾಗಿ ಧರ್ಮ ಬಹಿರಂಗವಾಗಿ ದೇಶ,
ಆರ್ ಎಸ್ ಎಸ್ ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರದ ಸಂವಿಧಾನವನ್ನು ಮನಃಪೂರ್ವಕವಾಗಿ ಸ್ವೀಕರಿಸುತ್ತದೆಯೇ : ಖಂಡಿತಾ ಇಲ್ಲ, ಮೇಲ್ನೋಟಕ್ಕೆ ಸ್ವೀಕರಿಸಿದಂತಿದ್ದರು ಆಂತರಿಕವಾಗಿ ವಿರೋಧಿಸುತ್ತದೆ.
ಆರ್ ಎಸ್‌ಎಸ್ ಹಿಡನ್ ಅಜೆಂಡಾ ಹೊಂದಿದೆಯೇ : ಹೌದು,
ಆರ್ ಎಸ್ ಎಸ್ ದೇಶದ ಸಂಕಷ್ಟ ಸಮಯದಲ್ಲಿ ಜನಸೇವೆ ಮಾಡುತ್ತದೆಯೇ : ಖಂಡಿತ ಹೌದು,
ಆರ್ ಎಸ್ ಎಸ್ ಗಾಂಧಿಯನ್ನು ದ್ವೇಷಿಸುತ್ತದೆಯೇ : ಮೇಲ್ನೋಟಕ್ಕೆ ಇಲ್ಲ, ಆಂತರ್ಯದಲ್ಲಿ ಹೌದು,
ಆರ್ ಎಸ್ ಎಸ್ ಗೋಡ್ಸೆಯನ್ನು ಬೆಂಬಲಿಸುತ್ತದೆಯೇ : ಬಾಹ್ಯವಾಗಿ ಇಲ್ಲ ಆಂತರ್ಯದಲ್ಲಿ ಹೌದು,
ಆರ್ ಎಸ್ ಎಸ್ ಅಂಬೇಡ್ಕರ್ ಅವರನ್ನು ವಿರೋಧಿಸುತ್ತದೆಯೇ : ಹೌದು,
ಆರ್ ಎಸ್ ಎಸ್ ಸ್ವಾಮಿ ವಿವೇಕಾನಂದರನ್ನು ಒಪ್ಪುತ್ತದೆಯೇ : ಭಾಗಶಃ ಹೌದು, ಸಂಪೂರ್ಣ ಇಲ್ಲ. ಇತ್ತೀಚೆಗೆ ಅವರ ಹೆಸರೇ ಹೇಳುವುದು ಅತ್ಯಂತ ಕಡಿಮೆ.
ಆರ್ ಎಸ್ ಎಸ್ ಸಾರ್ವರ್ಕರ್ ಅವರನ್ನು ಬೆಂಬಲಿಸುತ್ತದೆಯೇ : ಹೌದು,
ಆರ್ ಎಸ್ ಎಸ್ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಧರ್ಮೀಯರನ್ನು ದ್ವೇಷಿಸುತ್ತದಯೇ : ಹೌದು,
ಆರ್ ಎಸ್ ಎಸ್ ಜೈನ ಧರ್ಮವನ್ನು ದ್ವೇಷಿಸುತ್ತದೆಯೇ : ಇಲ್ಲ,
ಆರ್ ಎಸ್ ಎಸ್ ಪ್ರತ್ಯೇಕ ಲಿಂಗಾಯತ ಧರ್ಮವನ್ನು ಬೆಂಬಲಿಸುತ್ತದೆಯೇ : ಖಂಡಿತ ಇಲ್ಲ,
ಆರ್ ಎಸ್ ಎಸ್ ಅನ್ನು ನಿಷೇಧಿಸಬೇಕೆ : ಬೇಡ ಅದು ತನ್ನ ಕಾರ್ಯ ಚಟುವಟಿಕೆ ಮುಂದುವರಿಸಲಿ,
ಆರ್ ಎಸ್ ಎಸ್ ನ ಪ್ರಚೋದನಕಾರಿ ಮತ್ತು ವಿಭಜಕ ಚಟುವಟಿಕೆಗಳನ್ನು ನಿಯಂತ್ರಿಸಬೇಕೆ : ಹೌದು,
ಆರ್ ಎಸ್ ಎಸ್ ಅನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಬೇಕು.
ಆರ್ ಎಸ್ ಎಸ್ ಚಟುವಟಿಕೆ ತೀವ್ರವಾದಲ್ಲಿ, ಅದರ ಶಕ್ತಿ ಹೆಚ್ಚಾದಲ್ಲಿ ದೇಶ ಒಗ್ಗಟ್ಟಾಗುತ್ತದೆಯೇ ಅಥವಾ ವಿಭಜನೆಯಾಗುತ್ತದೆಯೇ : ಈಗಿನ ಸಮಯ, ಸಂದರ್ಭ, ಸನ್ನಿವೇಶಗಳನ್ನು ನೋಡಿದರೆ ಆರ್ ಎಸ್ ಎಸ್ ಪ್ರಬಲವಾದಷ್ಟೂ ದೇಶದ ಆಂತರಿಕ ಕಲಹ ಮತ್ತು ವಿಭಜನೆಯ ಸಾಧ್ಯತೆ ಹೆಚ್ಚಾಗಿದೆ.
ಆರ್ ಎಸ್ ಎಸ್ ನೇರವಾಗಿ ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತದೆಯೇ : ಇಲ್ಲ,
ದೇಶದ ಒಟ್ಟು ಹಿತಾಸಕ್ತಿಯಿಂದ ಆರ್ ಎಸ್ ಎಸ್ ನೂರು ವರ್ಷಗಳ ಸಂಭ್ರಮಕ್ಕೆ ಒಟ್ಟಾರೆ ಒಳ್ಳೆಯದು ಮತ್ತು ಕೆಟ್ಟದ್ದು ಎಂದು ನೂರಕ್ಕೆ ಎಷ್ಟು ಅಂಕ ಕೊಡಬಹುದು : ಐವತ್ತು ಒಳ್ಳೆಯದು – ಐವತ್ತು ಕೆಟ್ಟದ್ದು,
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೆಲವು ಹಿಂದುಳಿದ ಜಾತಿ ಸಮುದಾಯಗಳು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಧರ್ಮಗಳು ಆರ್ ಎಸ್ ಎಸ್ ಅನ್ನು ವಿರೋಧಿಸಲು ಕಾರಣಗಳಿದೆಯೇ : ಖಂಡಿತ ಇದೆ,
ಜನಸಂಖ್ಯೆಯಲ್ಲಿ ಪ್ರಬಲ ಸಮುದಾಯಗಳು, ಜಾತಿಯ ಮೇಲ್ವರ್ಗದವರು ಆರ್ ಎಸ್ ಎಸ್ ಅನ್ನು ಬೆಂಬಲಿಸಲು ಕಾರಣವಿದೆಯೇ : ಖಂಡಿತ ಇದೆ,
ಸ್ಥಾಪಿತ ಹಿತಾಸಕ್ತಿಗಳಿಗೆ ಆರ್ ಎಸ್ ಎಸ್ ನಿಂದ ಲಾಭವಿದೆಯೇ : ಖಂಡಿತ ಇದೆ,
ಬದಲಾವಣೆ ಬಯಸುವ ಶೋಷಿತ ಸಮುದಾಯಗಳಿಗೆ ಆರ್ ಎಸ್ ಎಸ್ ನಿಂದ ತೊಂದರೆ ಇದೆಯೇ : ಖಂಡಿತ ಇದೆ,
ಕೆಲವು ಸಲಹೆಗಳು……..
ಆರ್ ಎಸ್ ಎಸ್ ರಾಷ್ಟ್ರಧ್ವಜವನ್ನು ತನ್ನ ಧ್ವಜ ಚಿನ್ಹೆಯಾಗಿ ಅಳವಡಿಸಿಕೊಳ್ಳಲಿ,
ಆರ್ ಎಸ್ ಎಸ್ ರಾಷ್ಟ್ರಗೀತೆಯನ್ನು ಒಪ್ಪಿಕೊಳ್ಳಲಿ,
ಆರ್ ಎಸ್ ಎಸ್ ಭಾರತದ ಬಹುತ್ವ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಒಪ್ಪಿಕೊಳ್ಳಲಿ,
ಆರ್ ಎಸ್ ಎಸ್ ಭ್ರಷ್ಟಾಚಾರ ವಿರುದ್ಧ ಹೋರಾಡಲಿ,
ಆರ್ ಎಸ್ ಎಸ್ ಭಾರತದ ಜಾತಿ ವ್ಯವಸ್ಥೆಯನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಲಿ,
ಆರ್ ಎಸ್ ಎಸ್ ಮೌಢ್ಯಗಳ ವಿರುದ್ಧ ಹೋರಾಡಲಿ ಮತ್ತು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಲಿ….
ಇಷ್ಟೆಲ್ಲಾ ಆರ್ ಎಸ್ ಎಸ್ ಮಾಡುವುದಾದರೆ ದೇಶ ಇಸ್ಲಾಮೀಕರಣವಾದರೆ ನಮ್ಮ ಜವಾಬ್ದಾರಿ ಏನು ಎಂದು ಕೆಲವರು ಕೇಳುತ್ತಾರೆ. ನಿಜ ಈ ದೇಶ ಯಾವ ಕಾರಣಕ್ಕೂ ಇಸ್ಲಾಮೀಕರಣಕ್ಕೆ ಒಳಗಾಗಬಾರದು. ಇದು ಹಿಂದೂ ಜೀವನ ಶೈಲಿಯ, ಭಾರತಿಕರಣದ ನೆಲ. ಇಲ್ಲಿ ಸ್ವಾತಂತ್ರ್ಯ, ಸಮಾನತೆ, ಮುಕ್ತತೆ, ಸದಾ ಜಾಗೃತವಾಗಿರಬೇಕು. ಪ್ರಶ್ನಿಸುವ ಮನೋಭಾವ ನಿರಂತರವಾಗಿ ಜಾರಿಯಲ್ಲಿರಬೇಕು.
ಆದ್ದರಿಂದ ಇಸ್ಲಾಮೀಕರಣಕ್ಕೆ ಕೇಸರೀಕರಣ ಪರಿಹಾರವಲ್ಲ. ಅದೊಂದು ವಿಭಜಕ ನಡೆ. ಎಲ್ಲಕ್ಕೂ ಭಾರತೀಕರಣ, ಸಂವಿಧಾನೀಕರಣ ನಿಜವಾದ ಉತ್ತರ. ಈ ದೇಶಕ್ಕೆ ಒಂದೇ ಅಪರಾಧ ನೀತಿ ಸಂಹಿತೆ ಇದೆ. ಆದರೆ ಅದರ ಜೊತೆ ಧಾರ್ಮಿಕ ಸ್ವಾತಂತ್ರ್ಯವೂ ಇದೆ. ನಿಜವಾಗಲೂ ನಾವೆಲ್ಲರೂ ಭಾರತೀಯರಾದರೆ ಈ ಧಾರ್ಮಿಕ ಸ್ವಾತಂತ್ರ್ಯಕ್ಕೂ ಮಿತಿ ಹೇರಬೇಕಿದೆ. ಏಕೆಂದರೆ ಧಾರ್ಮಿಕ ಸ್ವಾತಂತ್ರ್ಯ ಅಪಾಯಕಾರಿ ಹಂತ ತಲುಪುತ್ತಿರುವುದರಿಂದ ಯಾವುದೇ ಧರ್ಮ, ದೇವರ ಆಚರಣೆಗಳು ತೀರ ಖಾಸಗಿಯಾಗಿ ಮನೆಗಳಿಗೆ ಸೀಮಿತವಾದರೆ ಖಂಡಿತವಾಗಲೂ ದೇಶದ ಶಾಂತಿ ಸಮಗ್ರತೆ ಕಾಪಾಡಬಹುದು.
ಧರ್ಮಗಳ ನಡುವೆ ಸಮನ್ವಯ ಸಾಧಿಸುವುದು ಅಸಾಧ್ಯ. ಬದಲಾಗಿ ಧರ್ಮಗಳನ್ನೇ ನಿಯಂತ್ರಣಕ್ಕೆ ಒಳಪಡಿಸಬೇಕು. ಅನಾವಶ್ಯಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ನಂಬಿಕೆಗಳ ಆಚರಣೆ ಅಷ್ಟೇನೂ ಒಳ್ಳೆಯ ಲಕ್ಷಣವಲ್ಲ. ಅದಕ್ಕೆ ಬದಲಾಗಿ ಸಾಂಸ್ಕೃತಿಕ ಉತ್ಸವಗಳು, ಶೈಕ್ಷಣಿಕ ಉತ್ಸವಗಳು, ವೈಜ್ಞಾನಿಕ ಉತ್ಸವಗಳು, ಕ್ರೀಡಾ ಉತ್ಸವಗಳು ಈ ದೇಶದಲ್ಲಿ ಮುನ್ನೆಲೆಗೆ ಬಂದರೆ ಅಮೆರಿಕ, ಚೀನಾ ದೇಶವನ್ನು ಮೀರಿ ನಾವು ಮುನ್ನಡೆಯಬಹುದು. ಧಾರ್ಮಿಕ ನಂಬಿಕೆಗಳು ವೈಯಕ್ತಿಕವಾದದ್ದು, ಮಾನಸಿಕವಾದದ್ದು. ಅದನ್ನು ಹೊರತುಪಡಿಸಿ ಅದರಿಂದ ಹೆಚ್ಚೇನೂ ಲಾಭಗಳಿಲ್ಲ.
ಹಿಂದೆ ಧರ್ಮಗಳು ಈ ಸಮಾಜವನ್ನು ಮುನ್ನಡೆಸಿರಬಹುದು. ಆದರೆ ಈಗ ಸಂವಿಧಾನ ಈ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಲು, ಜನರ ಜೀವನ ಮಟ್ಟವನ್ನು ಅತ್ಯುತ್ತಮ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಸಂವಿಧಾನದ ನೀತಿ ನಿಯಮಗಳೇ ಸಾಕು. ಅದಕ್ಕೆ ಒಂದಷ್ಟು ಕಾಲಕಾಲಕ್ಕೆ ತಕ್ಕಂತೆ ತಿದ್ದುಪಡಿ ಅವಶ್ಯಕತೆಯೂ ಇದೆ. ಜೊತೆಗೆ ಕಾನೂನನ್ನು ಮೀರಿ ಮಾನವೀಯ ಮೌಲ್ಯಗಳನ್ನು ಈ ಸಮಾಜದಲ್ಲಿ ಪುನಃ ಸ್ಥಾಪಿತಗೊಳಿಸಿದರೆ ನಿಜಕ್ಕೂ ಭಾರತ 21ನೇ ಶತಮಾನದ ಜಾಗತಿಕ ನಾಯಕತ್ವದ ಸ್ಪರ್ಧೆಯಲ್ಲಿ ಇರಬಹುದು. ನಮ್ಮ ನಮ್ಮಲ್ಲೇ ಬೇಡದ ವಿಷಯಗಳಿಗೆ ಹಠ ಮಾಡಿ ಜಗಳ ಮಾಡಿಕೊಂಡರೆ ದೇಶ ಹಿಮ್ಮುಖವಾಗಿ ಚಲಿಸಿದಂತಾಗುತ್ತದೆ.
ಇಸ್ಲಾಮೀಕರಣಕ್ಕೆ ಭಾರತೀಕರಣವೇ ಸರಿಯಾದ ಉತ್ತರ, ಕೇಸರೀಕರಣವಲ್ಲ.
” ಬಹುತ್ವ ಭಾರತವೇ ಬಲಿಷ್ಠ ಭಾರತ “
ದಯವಿಟ್ಟು ಯೋಚಿಸಿ ನೋಡಿ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

