ಮಂಡ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆ – ಮಹಿಳೆಯರ ನೈರ್ಮಲ್ಯಕ್ಕಾಗಿ ಉಚಿತ ಮುಟ್ಟಿನ ಕಪ್ ವಿತರಣೆ ಅಭಿಯಾನಕ್ಕೆ ಚಾಲನೆ
ಮಂಡ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆ – ಮಹಿಳೆಯರ ನೈರ್ಮಲ್ಯಕ್ಕಾಗಿ ಉಚಿತ ಮುಟ್ಟಿನ ಕಪ್ ವಿತರಣೆ ಅಭಿಯಾನಕ್ಕೆ ಚಾಲನೆ
ಮಂಡ್ಯ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆಯನ್ನು ಇಂದು ಮಂಡ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಶುದ್ಧತೆಯ ಕಡೆಗಿನ ಸಾರ್ವಜನಿಕ ಜಾಗೃತಿ ಕುರಿತು ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಯಿತು.
ಈ ಸಂಭ್ರಮದ ವೇದಿಕೆಯಲ್ಲಿ ಮಹಿಳೆಯರ ನೈರ್ಮಲ್ಯ ಮತ್ತು ಆರೋಗ್ಯದ ಪರವಾಗಿ ರಾಜ್ಯದಾದ್ಯಂತ ಉಚಿತ ಮಟ್ಟಿನ ಕಪ್ ವಿತರಣೆ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಹಿಳೆಯರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಸರದ ಮೇಲಿನ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವ ಉದ್ದೇಶ ಈ ಅಭಿಯಾನದ ಹಿಂದಿದೆ.
ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಪಿ.ಎಂ. ನರೇಂದ್ರಸ್ವಾಮಿ, ಮಂಡಳಿಯ ಮಾಜಿ ಅಧ್ಯಕ್ಷ ಶ್ರೀ ಪಿ. ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ಶ್ರೀ ದಿನೇಶ್ ಗೂಳಿಗೌಡ, ಶ್ರೀ ಮಧು ಜಿ ಮಾದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹಲವಾರು ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, “ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ಐವತ್ತು ವರ್ಷಗಳಿಂದ ರಾಜ್ಯದ ಪರಿಸರ ಸಂರಕ್ಷಣೆಗೆ, ನದಿ–ನಾಲೆ ಹಾಗೂ ವಾಯು ಶುದ್ಧತೆಗೆ ನಿರಂತರ ಸೇವೆ ಸಲ್ಲಿಸುತ್ತಿದೆ. ಮುಂದಿನ ಪೀಳಿಗೆಗೆ ಹಸಿರು ಮತ್ತು ಶುದ್ಧ ರಾಜ್ಯವನ್ನು ನೀಡುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದ ಹಲವಾರು ಸಂಸ್ಥೆಗಳಿಗೆ ಪ್ರಶಸ್ತಿ ಪತ್ರ ಹಾಗೂ ಗೌರವ ಸ್ಮಾರಕ ನೀಡಲಾಯಿತು.

