ಬೆಂಗಳೂರು : ಹೈಕೋರ್ಟ್ ಸ್ಥಳಾಂತರ ವಿಚಾರ – ಸರ್ಕಾರದ “ಸ್ಥಳ ಪರಿಶೀಲನೆ” ಮಾತು ಜನರ ಕಿವಿಗೆ ಮಿಠಾಯಿ?
ಬೆಂಗಳೂರು : ಹೈಕೋರ್ಟ್ ಸ್ಥಳಾಂತರ ವಿಚಾರ – ಸರ್ಕಾರದ “ಸ್ಥಳ ಪರಿಶೀಲನೆ” ಮಾತು ಜನರ ಕಿವಿಗೆ ಮಿಠಾಯಿ?
ಹೈಕೋರ್ಟ್ ಸ್ಥಳಾಂತರದ ಹೆಸರಿನಲ್ಲಿ ಸರ್ಕಾರ ಜನರ ಮನಸ್ಸಿನಲ್ಲಿ ಮತ್ತೊಂದು ಸಂಶಯ ಬೀಜ ಬಿತ್ತಿದಂತಾಗಿದೆ. ಕಬ್ಬನ್ ಪಾರ್ಕ್‌ನ ಐತಿಹಾಸಿಕ ಹೃದಯ ಭಾಗದಲ್ಲಿರುವ ಹೈಕೋರ್ಟ್ ಕಟ್ಟಡವನ್ನು ಸ್ಥಳಾಂತರಿಸುವ ವಿಚಾರ ಈಗ ತಲೆ ಎತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಯ ಪ್ರಕಾರ, ಕೆಲವು ವಕೀಲರು ರೇಸ್ ಕೋರ್ಸ್ ಪ್ರದೇಶವನ್ನು ಹೈಕೋರ್ಟ್‌ಗೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ “ಸ್ಥಳ ಪರಿಶೀಲನೆ” ಮಾಡಲಿದೆ ಅಂತೆ!
ಆದರೆ ಪ್ರಶ್ನೆ ಏನೆಂದರೆ — ಸರ್ಕಾರಕ್ಕೆ ಇಷ್ಟೊಂದು ತುರ್ತು ಏಕೆ? ನಗರ ಹೃದಯದಲ್ಲಿರುವ ಹಸಿರು ಪ್ರದೇಶವನ್ನು ಮತ್ತೊಮ್ಮೆ “ಆಸಕ್ತಿ ವಲಯ” ಮಾಡಬೇಕೆಂಬ ಬಯಕೆ ಇದೆಯೇ? ರೇಸ್ ಕೋರ್ಸ್ ಈಗಾಗಲೇ ಲಾಬಿ ಶಕ್ತಿ ಮತ್ತು ಭೂ ರಾಜಕೀಯದ ಆಟದ ಮೈದಾನ ಎನ್ನುವುದು ಎಲ್ಲರಿಗೂ ಗೊತ್ತಿದೆ.
ಹೈಕೋರ್ಟ್ ಸ್ಥಳಾಂತರದ ಹೆಸರಿನಲ್ಲಿ ರೇಸ್ ಕೋರ್ಸ್ ಪ್ರದೇಶವನ್ನು “ಕ್ಯಾಪ್ಚರ್” ಮಾಡುವ ಯೋಜನೆ ನಡೆಯುತ್ತಿರುವಂತ ಭಾವನೆ ಸಾರ್ವಜನಿಕರಲ್ಲಿದೆ. ಕಬ್ಬನ್ ಪಾರ್ಕ್‌ನ ಹಸಿರು ಆವರಣದಲ್ಲಿ ನ್ಯಾಯದ ಮಂದಿರ ಇದ್ದದ್ದೇ ಬೆಂಗಳೂರು ನಗರದ ಶ್ರೇಯಸ್ಸು. ಅದನ್ನು ಕದಡುವ ಪ್ರಯತ್ನ ಮಾಡಿದರೆ, ಅದು ಕಾನೂನು ಲೋಕಕ್ಕೂ, ಪರಿಸರಕ್ಕೂ ದೊಡ್ಡ ಹೊಡೆತ.
“ಹೈಕೋರ್ಟ್ ನಗರ ಹೊರಗೆ ಹೋಗಬಾರದು” ಎಂದು ಉಪಮುಖ್ಯಮಂತ್ರಿಯೇ ಹೇಳಿದ್ದರೂ, ಸರ್ಕಾರದ ಕ್ರಮಗಳು ಅದು ಕೇವಲ ರಾಜಕೀಯ ಮಾತಲ್ಲವೇ ಎಂಬ ಅನುಮಾನ ಮೂಡಿಸಿದೆ. ಇಂದು “ಪರಿಶೀಲನೆ”, ನಾಳೆ “ಮಂಜೂರು” ಆಗುವುದೇ?
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೇಸ್ ಕೋರ್ಸ್‌ಗೆ ತುರ್ತುವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿಜಕ್ಕೂ ಇದು ಕಾನೂನಿನ ಸೌಕರ್ಯಕ್ಕಾಗಿ ನಡೆಯುತ್ತಿರುವದು ಅಥವಾ ಕೆಲವರ “ಆಸಕ್ತ ಪ್ರದೇಶ” ರಕ್ಷಣೆಗೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.

