ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ?
ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ?
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು — “ಪೊಲೀಸರು ಲಂಚ ಸ್ವೀಕರಿಸುವುದು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುತ್ತದೆ” ಎಂದು ಹೇಳಿಕೆ ನೀಡಿರುವುದು ಜನರ ಗಮನ ಸೆಳೆದಿದೆ. ಆದರೆ ಜನಸಾಮಾನ್ಯರ ಮನದಲ್ಲಿ ಎದ್ದಿರುವ ಪ್ರಶ್ನೆ — ಲಂಚ ಕೊಡುವ ವ್ಯವಸ್ಥೆ, ಲಂಚಕ್ಕೆ ಕಾರಣವಾಗುವ ಪೋಸ್ಟಿಂಗ್ ಮಾಫಿಯಾ ಬಗ್ಗೆ ಯಾರು ಮಾತನಾಡುತ್ತಾರೆ?
ಸಾಮಾನ್ಯ ಪೋಲೀಸ್ ಅಧಿಕಾರಿ ಅಥವಾ ಪಿಡಿಓ ಮಟ್ಟದ ನೌಕರರು ಅಧಿಕಾರಕ್ಕೆ ಬಂದ ಕೂಡಲೇ ಲಕ್ಷಾಂತರ ರೂಪಾಯಿ ನೀಡಿ ಪೋಸ್ಟಿಂಗ್ ಪಡೆಯಬೇಕಾಗುತ್ತದೆ ಎಂಬುದು ಮುಚ್ಚಿದ ರಹಸ್ಯವಲ್ಲ. ಹೀಗಾಗಿ ಆ ಹಣವನ್ನು ವಾಪಸ್ ಪಡೆಯಲು ಕೆಲವರು ಜನರಿಂದ ಲಂಚ ತಗೊಳ್ಳುತ್ತಾರೆ. ನಂತರ ಸರ್ಕಾರದವರು “ಲಂಚ ತಗೊಳ್ಳಬೇಡಿ” ಎಂಬ ನೈತಿಕ ಪಾಠ ಹೇಳುವುದು ಜನರ ಕಿವಿಗೆ ವ್ಯಂಗ್ಯವಾಗಿ ಕೇಳುತ್ತದೆ.
ಜನರ ಕೋಪದ ಧ್ವನಿಯೇ ಹೀಗಿದೆ..
“ಮೊದಲು ಪೋಸ್ಟಿಂಗ್ ಗೆ ಲಂಚಾ ತಗೊಳೋದು ನಿಲ್ಲಿಸಿ, ನಂತರ ಸಣ್ಣ ನೌಕರರಿಗೆ ನೀತಿಪಾಠ ಮಾಡಿ!”
ರಾಜ್ಯದಲ್ಲಿ ಈ ರೀತಿಯ ಅನೇಕ ಉದಾಹರಣೆಗಳಿವೆ — ಪೋಸ್ಟಿಂಗ್‌ಗಾಗಿ ಸಾಲ ಮಾಡಿದ್ದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕುಟುಂಬಗಳು ದುರ್ಬಲ ಸ್ಥಿತಿಗೆ ತಲುಪಿವೆ. ಇವುಗಳೆಲ್ಲಕ್ಕೂ ಮೂಲ ಕಾರಣ — ವ್ಯವಸ್ಥೆಯಲ್ಲಿರುವ ಭ್ರಷ್ಟ ಮಾದರಿ.
ಜನರ ಬೇಡಿಕೆ ಸರಳ :
ಎಲ್ಲ ಪೊಲೀಸ್ ಠಾಣೆಗಳಲ್ಲಿ ಲೈವ್ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇರಲಿ. ಪೊಲೀಸ್ ಠಾಣೆಗಳಲ್ಲಿ ಜನರು ನೀಡುವ ಫಿರ್ಯಾದುಗಳು ಕ್ಯಾಮರಾ ಮುಂದೆ ದಾಖಲಾಗಲಿ.
ಯಾವುದೇ ಇಲಾಖೆ ಇರಲಿ, ಜನಸೇವೆಗೆ ಪಾರದರ್ಶಕತೆ ತರಬೇಕು.
ಇದು ಕೇವಲ ಪೊಲೀಸರ ವಿಷಯವಲ್ಲ..
ಇಡೀ ಆಡಳಿತ ವ್ಯವಸ್ಥೆಯ ವಿಷಯ. ಲಂಚ ತೆಗೆದುಕೊಳ್ಳುವವರನ್ನಷ್ಟೇ ಅಲ್ಲ, ಲಂಚದ ಸರಪಳಿಯನ್ನು ಹುಟ್ಟಿಸುವವರನ್ನೂ ಕಾನೂನು ಹಿಡಿಯಬೇಕು.
ಜನರ ನುಡಿಯಲ್ಲಿ…
“ಲಂಚ ತಗೊಳ್ಳಬೇಡಿ ಅಂದ್ರೆ ಸರಿ, ಆದರೆ ಮೊದಲು ಲಂಚ ಕೊಡುವ ವ್ಯವಸ್ಥೆ ಮುರಿದು ಹಾಕಿ!”

