ಸುದ್ದಿ 

ಅಕ್ಕಾ ಪಡೆ ರಚನೆಗೆ ಪೂರ್ವಭಾವಿ ಸಭೆ: ನವೆಂಬರ್‌ 19ರಂದು ಅಧಿಕೃತ ಚಾಲನೆ

Taluknewsmedia.com

ಅಕ್ಕಾ ಪಡೆ ರಚನೆಗೆ ಪೂರ್ವಭಾವಿ ಸಭೆ: ನವೆಂಬರ್‌ 19ರಂದು ಅಧಿಕೃತ ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ “ಅಕ್ಕಾ ಪಡೆ” ರಚನೆಗೆ ಸಿದ್ಧತೆಗಳು ಅಂತಿಮ ಹಂತಕ್ಕೆ ಕಾಲಿಟ್ಟಿವೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ನಡೆಸಲಾಯಿತು.

ನವೆಂಬರ್‌ 19ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದ ವೇಳೆ ಅಕ್ಕಾ ಪಡೆಗೆ ಅಧಿಕೃತ ಚಾಲನೆ ನೀಡಲಾಗುವ ನಿರೀಕ್ಷೆಯಿದ್ದು, ಅದರ ಪೂರ್ವಸಿದ್ಧತೆ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ವಿನಿಮಯ ನಡೆಯಿತು.

ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪಿ. ಹರಿಶೇಖರನ್, ಶರತ್ ಚಂದ್ರ, ಕಲಾ ಕೃಷ್ಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ನಿರ್ದೇಶಕ ಮಹೇಶ್ ಬಾಬು, ಆಪ್ತ ಕಾರ್ಯದರ್ಶಿ ಡಾ. ಟಿ.ಎಚ್. ವಿಶ್ವನಾಥ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್ ಹಾಗೂ ಜಂಟಿ ನಿರ್ದೇಶಕ ಪುಷ್ಟ ರಾಯರ್‌ ಸೇರಿದಂತೆ ಹಲವಾರು ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಅಕ್ಕಾ ಪಡೆ ರಚನೆಯ ಉದ್ದೇಶ — ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಶ್ರೇಯಸ್ಸು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ತ್ವರಿತ ಸಹಾಯ ಒದಗಿಸುವಂತಂತಹ ವಿಶೇಷ ತಂಡವನ್ನು ಸಜ್ಜುಗೊಳಿಸುವುದು. ಸರ್ಕಾರದ ಈ ಹೊಸ ಪ್ರಯತ್ನದಿಂದ ರಾಜ್ಯದ ಮಹಿಳಾ ಸಬಲೀಕರಣ ಪ್ರಯತ್ನಗಳಿಗೆ ಹೊಸ ಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

Related posts