ಶಾಲೆಯ ಮಕ್ಕಳಿಗೆ ಹಾಲು ವಿತರಣೆ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮೀಪದ ಬಯಲಿನಿಂದ ಜೇನುಹುಳಗಳ ಗುಂಪು ಬಂದು ದಾಳಿ
ಮಡಿಕೇರಿ: ವಿರಾಜಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ (ನವೆಂಬರ್ 3) ನಡೆದ ಅಸಾಮಾನ್ಯ ಘಟನೆ ಎಲ್ಲರ ಮನ ಕದಡಿದೆ. ಶಾಲೆಯ ಮಕ್ಕಳಿಗೆ ಹಾಲು ವಿತರಣೆ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮೀಪದ ಬಯಲಿನಿಂದ ಜೇನುಹುಳಗಳ ಗುಂಪು ಬಂದು ದಾಳಿ ನಡೆಸಿದ್ದು, ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕೆಲ ಶಿಕ್ಷಕರು ಅಸ್ವಸ್ಥರಾಗಿದ್ದಾರೆ.
ಜೇನುಹುಳುಗಳ ದಾಳಿಯಿಂದ ಪಾರಾಗುವ ಸಲುವಾಗಿ ಮುಖ್ಯ ಶಿಕ್ಷಕಿ ಅನ್ನಮ್ಮ ಪಿ.ಡಿ ಮತ್ತು ಸಿಬ್ಬಂದಿಗಳು ತಕ್ಷಣವೇ ಮಕ್ಕಳನ್ನು ತರಗತಿ ಕೊಠಡಿಗಳ ಒಳಗೆ ಸೇರಿಸಿ ಎಚ್ಚರ ವಹಿಸಿದರಿಂದ ದೊಡ್ಡ ಅನಾಹುತ ತಪ್ಪಿದೆ. ಆದರೆ ಕೆಲವರು, ಸೇರಿದಂತೆ ಮುಖ್ಯ ಶಿಕ್ಷಕಿ ತಾವೂ ಜೇನುಹುಳುಗಳ ಕಡಿತಕ್ಕೆ ಒಳಗಾದರು.
ಘಟನೆ ನಂತರ ವಿದ್ಯಾರ್ಥಿಗಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆಯವರು ಘಟನೆ ಕುರಿತು ತನಿಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸ್ಥಳೀಯರು ಈ ಘಟನೆಯ ಮೇಲೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಶಾಲಾ ಆವರಣದ ಸುತ್ತಮುತ್ತ ಸ್ವಚ್ಛತೆ ಹಾಗೂ ಸುರಕ್ಷಾ ಕ್ರಮಗಳ ಕೊರತೆ ಕಾರಣವಾಗಿರಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮಾಜ ಸೇವಾ ಸಂಘಟನೆಗಳು ಕೂಡ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ, “ಶಾಲೆಗಳಲ್ಲಿ ತುರ್ತು ಪರಿಸ್ಥಿತಿ ನಿರ್ವಹಣಾ ತರಬೇತಿ” ಅಗತ್ಯವಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿವೆ.
ಈ ಘಟನೆ ಮಕ್ಕಳ ಭಯವನ್ನು ಹೆಚ್ಚಿಸಿದರೂ, ಶಿಕ್ಷಕರ ತ್ವರಿತ ಕ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

