ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಅಸ್ತ್ರ ಪ್ರಯೋಗ; ವೇಣುಗೋಪಾಲ್ ಜೊತೆ ಹೈ ವೋಲ್ಟೇಜ್ ಸಭೆ..
ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಅಸ್ತ್ರ ಪ್ರಯೋಗ; ವೇಣುಗೋಪಾಲ್ ಜೊತೆ ಹೈ ವೋಲ್ಟೇಜ್ ಸಭೆ..
ಮೊನ್ನೆಷ್ಟೇ ರಾಜಕೀಯ ಶಾಶ್ವತವಲ್ಲ ಎಂದು ವೈರಾಗ್ಯದ ಮಾತುಗಳನ್ನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೆನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ 15 ನಿಮಿಷಕ್ಕೂ ಹೆಚ್ಚು ಕಾಲ ಹೈ ವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ. ಈ ಸಭೆಯ ನಂತರ, ಮಂಗಳೂರಿನ ಕಾವೇರಿ ಗೆಸ್ಟ್ ಹೌಸ್ನಲ್ಲಿ ನಡೆದ ಲಂಚ್ ಮೀಟಿಂಗ್ನಲ್ಲಿ ಸಿಎಂ, ವೇಣುಗೋಪಾಲ್ ಸೇರಿದಂತೆ ಸಚಿವರಾದ ಹೆಬ್ಬಾಳ್ಕರ್, ದಿನೇಶ್ ಗುಂಡುರಾವ್, ಜಮೀರ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಸ್ಪೀಕರ್ ಖಾದರ್ ಭಾಗಿಯಾಗಿದ್ದರು. ಈ ಭೋಜನಕೂಟದಲ್ಲಿ ನಾಟಿಕೋಳಿ ಸಾರು, ನೀರ್ದೋಸೆ ಮತ್ತು ವಿವಿಧ ಬಗೆಯ ಮೀನಿನ ಖಾದ್ಯಗಳು ಇದ್ದವು.
ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಮತ್ತು ದೆಹಲಿಯಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿಗೆ ಕರೆದರೆ ಮಾತ್ರ ಹೋಗುವುದಾಗಿ ಅವರು ತಿಳಿಸಿದರು. ಇತ್ತ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅಹಿಂದ ನಾಯಕರು ಮಂಗಳೂರಿನಲ್ಲಿ ಬಲ ಪ್ರದರ್ಶನ ಮಾಡುತ್ತಿರುವ ಹೊತ್ತಿನಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ವೇಣುಗೋಪಾಲ್ ಅವರನ್ನು ಸಿಎಂ ಭೇಟಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಇದು ತಪ್ಪೇನಿಲ್ಲ, ರಾಹುಲ್ ಗಾಂಧಿಯವರನ್ನಾಗಲಿ ಅಥವಾ ಖರ್ಗೆ ಸಾಹೇಬರನ್ನಾಗಲಿ ಭೇಟಿ ಮಾಡುವುದು ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರಿಂದ ಜಾತಿ ಅಸ್ತ್ರ ಪ್ರಯೋಗ..
ಮಂಗಳೂರಿನ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಇವತ್ತು ಜನರನ್ನು ಹೊಡೆಯುವ ಕೆಲಸ ಆಗಬಾರದು ಎಂದು ಹೇಳುವ ಮೂಲಕ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ಅವರು, ಆಪರೇಷನ್ ಮಾಡಿಸಿಕೊಳ್ಳುವಾಗ, ಕೇವಲ ಕುರುಬರ ಜಾತಿಯವರ ರಕ್ತವೇ ಬೇಕು ಎಂದು ಕೇಳಲಾಗುವುದಿಲ್ಲ. ಆಗ ದಲಿತರ, ಮುಸಲ್ಮಾನರ, ಕ್ರಿಶ್ಚಿಯನ್ನರ, ಹಿಂದುಗಳ ಅಥವಾ ಮರಾಠರ ರಕ್ತವಿರಲಿ, ಯಾವುದೇ ರಕ್ತವಾದರೂ ಶರೀರಕ್ಕೆ ತೆಗೆದುಕೊಳ್ಳಲಾಗುತ್ತದೆ. ಆದರೆ, ವಾಸಿಯಾದ ಮೇಲೆ ‘ನೀನು ಯಾವ ಜಾತಿಯವನು, ನಾ ಯಾವ ಧರ್ಮದವನು’ ಎಂದು ಕೇಳುವುದು ಕೇವಲ ಸ್ವಾರ್ಥ ಎಂದು ಅಭಿಪ್ರಾಯಪಟ್ಟರು. ಬೆಂಬಲಿಗರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪರವಾಗಿ ಘೋಷಣೆ ಕೂಗಿದ್ದರ ಕುರಿತು ಪ್ರತಿಕ್ರಿಯಿಸಿದ ನಾಯಕರು, ಅದೆಲ್ಲವೂ ದೊಡ್ಡದಲ್ಲ, ಇವು ಮೊದಲಿನಿಂದಲೂ ಇರುತ್ತವೆ ಎಂದು ಹೇಳಿದರು

