ಸುದ್ದಿ 

ನಿರ್ಮಾಣ ಭವನದಲ್ಲಿ ಸುರಕ್ಷತಾ ಲೋಪ: ಕಾರ್ಮಿಕನ ದುರ್ಘಟನಾತ್ಮಕ ಸಾವು

Taluknewsmedia.com

ಬೆಂಗಳೂರು, ಜೂನ್ 19: ನಗರದ ಪೂರ್ಣಪ್ರಜ್ಞ ಲೇಔಟ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಭವನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ ದುರ್ಘಟನೆಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಮಲ್ಲಪ್ಪ ಎಂದು ಗುರುತಿಸಲಾಗಿದೆ. ಮತ್ತೊಮ್ಮೆ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರ ಜೀವಕ್ಕೆ ಹಾನಿಯಾದ ದುಃಖಕರ ಘಟನೆ ವರದಿಯಾಗಿದೆ. ಸುಮಾರು 12 ವರ್ಷಗಳಿಂದ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಲ್ಲಪ್ಪ ಅವರು ಕಳೆದ ಒಂದು ವರ್ಷದಿಂದ ಮೆಸ್ತ್ರಿ ಮಂಜುನಾಥ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.ಜೂನ್ 15ರಂದು ಬೆಳಗ್ಗೆ ಸುಮಾರು 7:30ಕ್ಕೆ ಮಲ್ಲಪ್ಪ ಅವರನ್ನು ಮೆಸ್ತ್ರಿ ಮಂಜುನಾಥ್ ಕರೆದುಕೊಂಡು ಹೋಗಿ, ಪೂರ್ಣಪ್ರಜ್ಙ ಲೇಔಟ್‌ನ ಕುಮಾರನ್ ಸ್ಕೂಲ್ ಹತ್ತಿರ ನಿರ್ಮಾಣದಲ್ಲಿದ್ದ ಬಿಲ್ಡಿಂಗ್‌ನಲ್ಲಿ ಕೆಲಸಕ್ಕೆ ಹಚ್ಚಿದ್ದರು. ಈ ಭವನ ಬಸವಯ್ಯ ಎಂಬುವವರಿಗೆ ಸೇರಿದ್ದು, ಕಾಮಗಾರಿ ಕಂಟ್ರಾಕ್ಟರ್ ರಮೇಶ್ ಅವರ ನಿಯಂತ್ರಣದಲ್ಲಿತ್ತು.ಮಧ್ಯಾಹ್ನ 12:00 ಗಂಟೆ ಸಮಯದಲ್ಲಿ ಲಿಫ್ಟ್ ವಾಹನದ ಮೂಲಕ ಕಬ್ಬಿಣದ ಕಾಲಮ್ ಬಾಕ್ಸ್‌ನ್ನು ಮೇಲಂತಸ್ತಿಗೆ ಸಾಗಿಸುವ ಸಂದರ್ಭ, ಅದು ತಪ್ಪಾಗಿ ಜಾರಿ ಬಿದ್ದು ಮಲ್ಲಪ್ಪ ಅವರ ತಲೆಗೆ ತಾಗಿತ್ತು. ತಕ್ಷಣವೇ ಅವರನ್ನು ಸಮೀಪದ ನ್ಯಾನೋ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆ 7:15ಕ್ಕೆ ನಿಧನರಾದರು.ಮಲ್ಲಪ್ಪ ಅವರ ಪತ್ನಿ ಸಿದ್ದಮ್ಮ ಅವರು ನೀಡಿದ ದೂರಿನಲ್ಲಿ, ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಲ್ಡಿಂಗ್ ಮಾಲೀಕರಾದ ಬಸವಯ್ಯ, ಕಂಟ್ರಾಕ್ಟರ್ ರಮೇಶ್ ಮತ್ತು ಮೆಸ್ತ್ರಿ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.ಸುಬ್ರಹ್ಮಣ್ಯಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts