ಆತ್ಮಾನಂದ ಸರಸ್ವತಿ ಸ್ವಾಮೀಜಿಯ ವಿವಾದಾಸ್ಪದ ಹೇಳಿಕೆ: ಧಾರ್ಮಿಕ ದ್ವೇಷ ಪ್ರಚೋದನೆ ಆರೋಪದಲ್ಲಿ ಎಫ್‌ಐಆರ್ ದಾಖಲು.
ಬೆಂಗಳೂರು, ಜೂನ್ 19, 2025:ಸುಬ್ರಮಣ್ಯಪುರ ಠಾಣಾ ಪೊಲೀಸ್ ಇಲಾಖೆ ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ನಿಟ್ಟಿನಲ್ಲಿ ನೀಡಲಾದ ವಿವಾದಾತ್ಮಕ ಭಾಷಣದ ಕುರಿತಂತೆ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಂಬಂಧವಾಗಿ ಪೊಲೀಸ್ ಇಲಾಖೆ ತಕ್ಷಣ ಕ್ರಮ ತೆಗೆದುಕೊಂಡಿದೆ.ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ವಿನಯ್ ಕುಮಾರ್ ಎ.ಬಿ (ಹೆಚ್.ಸಿ 9784) ಅವರು ಠಾಣೆಗೆ ಹಾಜರಾಗಿ ನೀಡಿದ ಮಾಹಿತಿ ಪ್ರಕಾರ, 2025ರ ಜೂನ್ 16ರಂದು ಬೆಳಿಗ್ಗೆ 9:30ರ ಸಮಯದಲ್ಲಿ ಸೋಷಿಯಲ್ ಮೀಡಿಯಾ ನಿಗಾವಣೆಯ ವೇಳೆಯಲ್ಲಿ varthabharati.in ಎಂಬ ಜಾಲತಾಣದಲ್ಲಿ ದಿನಾಂಕ 15-06-2025 ರಂದು ರಾತ್ರಿ 10:36ಕ್ಕೆ ಅಪ್ಲೋಡ್ ಮಾಡಿದ ವಿವಾದಾತ್ಮಕ ವಿಡಿಯೋ ಪತ್ತೆಯಾಯಿತು.ವೀಡಿಯೊದಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು, “ದುಷ್ಟರನ್ನು ಕೊಲ್ಲುವುದು ಹಿಂದೂ ಧರ್ಮದ ಧ್ಯೇಯ. ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ನಾಶಮಾಡಬೇಕು. ಪ್ರತಿಯೊಬ್ಬರೂ ಶಿವಾಜಿಯಾಗಿ ಹೊರಬಂದು ಪಾಪಿಗಳ ವಿರುದ್ಧ ಹೋರಾಡಬೇಕು,” ಎಂಬಂತಹ ತೀವ್ರ ಧರ್ಮದ್ವೇಷ ಭರಿತ ಹೇಳಿಕೆ ನೀಡಿದ್ದಾರೆ.ಅಷ್ಟೇ ಅಲ್ಲದೆ, ಅವರು “ಸನಾತನ ಧರ್ಮದವರನ್ನು ಬಿಟ್ಟು ಬಾಕಿಯವರನ್ನು ಸಂಹರಿಸಬೇಕು” ಎಂಬಂತಹ ಅತಿರೇಕದ ಮಾತುಗಳನ್ನು ಆಡಿರುವುದು ದೃಢಪಟ್ಟಿದೆ. ಈ ಹೇಳಿಕೆಗಳು ಸಮಾಜದ ಶಾಂತಿ ಮತ್ತು ಧರ್ಮಗಳ ನಡುವಿನ ಸಹಜತೆಯ ಮೇಲೆ ತೀವ್ರ ಧಕ್ಕೆಯನ್ನು ಉಂಟುಮಾಡಬಹುದೆಂದು ಪೊಲೀಸರು ತಿಳಿಸಿದ್ದಾರೆ.ಅನುಸರಣೆಗಾಗಿ ತನಿಖೆ ನಡೆಸಿದಾಗ ಸ್ವಾಮೀಜಿಯು ಉತ್ತರಹಳ್ಳಿ, ಪೂರ್ಣ ಪ್ರಜ್ಞಾನನಗರದ ಸಿರಿರಾಮ್ ಪ್ಯಾರಡೈಸ್ ಅಪಾರ್ಟ್‌ಮೆಂಟ್ ನ ಫ್ಲಾಟ್ ನಂ.202 ರಲ್ಲಿ ಕಳೆದ 10 ವರ್ಷಗಳಿಂದ ವಾಸವಿರುವುದು ಪತ್ತೆಯಾಗಿದೆ. ಆದರೆ ವಿವಾದಾತ್ಮಕ ವಿಡಿಯೋ ಯಾವ ಸ್ಥಳದಲ್ಲಿ, ಯಾವ ದಿನಾಂಕದಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಿಲ್ಲ.ಈ ಹಿನ್ನೆಲೆಯಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 500, 196(1), 351(2) ಮತ್ತು 2.2.2-2023ರಡಿಯಲ್ಲಿ ಪ್ರಕರಣ ಸಂಖ್ಯೆ 249/2025 ರೂಪದಲ್ಲಿ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

