ಸುದ್ದಿ 

ಹುಳಿಮಾವು ಕೆರೆಯ ಬಳಿ ಅಕ್ರಮ ರಕ್ತಚಂದನ ಸಾಗಣಿಕೆ : ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ…

Taluknewsmedia.com

ಬೆಂಗಳೂರು, ಜೂನ್ 22: ನಗರದ ಹುಳಿಮಾವು ಕೆರೆಯ ಬಳಿ ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಭಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಹೆಚ್.ಸಿ. ನಯಾಜ್ ಅಹ್ಮದ್, ಆನಂದ್ ಕುಮಾರ್ ಡಿ.ಎನ್ ಹಾಗೂ ನಾಗರಾಜ್ ನಾಯಕ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಈ ಕಾರ್ಯಾಚರಣೆಯನ್ನು ನಡೆಸಿತು.ಸಂಜೆ ಸುಮಾರು 8 ಗಂಟೆಗೆ ಹುಳಿಮಾವು ಕೆರೆಯ ಬಳಿ ಖಾಲಿ ಜಾಗದಲ್ಲಿ ಶಂಕಾಸ್ಪದವಾಗಿ ನಿಂತಿದ್ದ ಇಬ್ಬರನ್ನು ಪೊಲೀಸರ ತಂಡ ವಶಕ್ಕೆ ತೆಗೆದುಕೊಂಡಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ಅವರು ಮೊಹಮ್ಮದ್ ಖುರ್ಷಿದ್ ಖಾನ್ (47, ದೆಹಲಿ ಮೂಲ) ಮತ್ತು ಶರವಣನ್ (43, ಯಶವಂತಪುರ, ಬೆಂಗಳೂರು) ಎಂದು ಗುರುತಿಸಲಾಗಿದೆ.ಅವರ ಬಳಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿ ಒಟ್ಟು 10 ರಕ್ತಚಂದನದ ಮರದ ತುಂಡುಗಳು, ಸುಮಾರು 97 ಕಿಲೋಗ್ರಾಂ ತೂಕದವು, ಪತ್ತೆಯಾಗಿದೆ. ಈ ತುಂಡುಗಳು ವಿವಿಧ ಉದ್ದ ಹಾಗೂ ಸುತ್ತಳತೆಯಲ್ಲಿದ್ದು, ಯಾವುದೇ ಕಾನೂನುಪರ ದಾಖಲೆಗಳಿಲ್ಲದೆ ಮರದ ತುಂಡುಗಳನ್ನು ಹೊಂದಿರುವುದಾಗಿ ಪತ್ತೆಯಾಗಿದೆ.ಆರೋಪಿಗಳಿಂದ ಈ ಮರದ ತುಂಡುಗಳು ಎಲ್ಲಿಂದ ಬಂದವು, ಎಲ್ಲಿಗೆ ಸಾಗಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಅವರು ಸಮರ್ಪಕವಾದ ಉತ್ತರ ನೀಡಲು ವಿಫಲರಾದರು. ತನಿಖೆ ವೇಳೆ, ರಕ್ತಚಂದನ ಸಾಗಣೆ ಅಕ್ರಮವೆಂದು ಅವರಿಗೆ ತಿಳಿದಿದ್ದರೂ ಅವರು ಈ ಕೃತ್ಯದಲ್ಲಿ ತೊಡಗಿರುವುದು ದೃಢಪಟ್ಟಿದೆ.ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 86, 87 ಮತ್ತು ಇತರ ಸಂಬಂಧಿತ ವಿಧಿಗಳಂತೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Related posts