ಬಿಟಿಎಂ ಲೇಔಟ್‌ನಲ್ಲಿ ಅಕ್ರಮ ಎಲ್‌ಪಿಜಿ ಸಿಲಿಂಡರ್ ದಾಸ್ತಾನು: ಶಾಲಾ ಮಕ್ಕಳಿಗೆ ಅಪಾಯದ ನೆರಳು..
ಬೆಂಗಳೂರು, ಜೂನ್ 22 – ನಗರದ ಬಿಟಿಎಂ ಲೇಔಟ್ 2ನೇ ಹಂತದ ಎಸ್.ಎನ್.ಎನ್ ಅಪಾರ್ಟ್‌ಮೆಂಟ್ ಹಾಗೂ ಏಕ್ಯ ಶಾಲೆಯ ಸಮೀಪ ಅಕ್ರಮವಾಗಿ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ, ಕಮರ್ಶಿಯಲ್ ಸಿಲಿಂಡರ್‌ಗಳಿಗೆ ಪುನಃ ಭರ್ತಿ (ರೀ-ಫಿಲ್ಲಿಂಗ್) ಮಾಡುತ್ತಿರುವ ಶಂಕೆಯ ಕುರಿತಂತೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭಿಸಿದ್ದು, ತನಿಖೆಗಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಿನಾಂಕ 18/06/2025 ರಂದು ಬೆಳಿಗ್ಗೆ 11:50ರ ವೇಳೆಗೆ ಸಿಸಿಬಿ ಕಛೇರಿಗೆ ಈ ಕುರಿತು ಭಾತ್ಮೀ ಮಾಹಿತಿ ಲಭಿಸಿದೆ. ಆಧಾರದ ಮೇಲೆ ಸಿಸಿಬಿಯ ಎಎಸ್‌ಐ ಮೊಹಮ್ಮದ್ ಜಬೀವುಲ್ಲಾ ಮತ್ತು ಎಎಸ್‌ಐ ಶ್ರೀನಿವಾಸ.ಟಿ ಅವರು ಮಧ್ಯಾಹ್ನ 12:40ರ ಸುಮಾರಿಗೆ ಬಿಟಿಎಂ ಲೇಔಟ್ 2ನೇ ಹಂತದ ಎಸ್.ಎನ್.ಎನ್ ಅಪಾರ್ಟ್‌ಮೆಂಟ್ ಹಾಗೂ ಏಕ್ಯ ಶಾಲೆಯ ಸಮೀಪದ ಸ್ಥಳಕ್ಕೆ ಭೇಟಿ ನೀಡಿದರು.
ಅಲ್ಲಿ ಸಾವಿರಾರು ಜನರು ವಾಸವಿರುವ ಅಪಾರ್ಟ್‌ಮೆಂಟ್ ಹಾಗೂ ಶಾಲೆಯಲ್ಲಿ ಮಕ್ಕಳು ಹಾಜರಿರುವ ಪರಿಸರದಲ್ಲಿಯೇ, ಸುಮಾರು 70-80 ಎಲ್.ಪಿ.ಜಿ ಸಿಲಿಂಡರ್‌ಗಳನ್ನು ತುಂಬಿರುವ ಐದು ಲಾರಿಗಳನ್ನು ನಿಲ್ಲಿಸಲಾಗಿದೆ. ಈ ಲಾರಿಗಳಿಂದ ಸಿಲಿಂಡರ್‌ಗಳನ್ನು ಇಳಿಸಿ ಹತ್ತಿರದ ಶೆಡ್‌ವರೆಗೆ ಸಾಗಿಸಲಾಗುತ್ತಿದ್ದು, ಶೆಡ್ ಒಳಗಡೆ ದಾಸ್ತಾನು ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಈ ಶೆಡ್‌ನಲ್ಲಿ ಅಕ್ರಮವಾಗಿ ಎಲ್.ಪಿ.ಜಿ ಸಿಲಿಂಡರ್‌ಗಳನ್ನು ರೀ-ಫಿಲ್ ಮಾಡಿ, ಕಮರ್ಶಿಯಲ್ ಸಿಲಿಂಡರ್‌ಗಳಾಗಿ ಬೇರೆಡೆ ಮಾರಾಟ ಮಾಡಲು ಸಿದ್ಧಪಡಿಸಲಾಗುತ್ತಿದೆ. ಈ ನಿರ್ಲಕ್ಷತೆಯ ನಡೆ ಯಾವುದೇ ಸಂದರ್ಭದಲ್ಲಾದರೂ ಅಗ್ನಿ ಅನಾಹುತಕ್ಕೆ ಕಾರಣವಾಗುವ ಅಪಾಯವಿದ್ದು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಜೀವಕ್ಕೆ ಹಾಗೂ ಆಸ್ತಿಗೆ ಗಂಭೀರ ಹಾನಿ ಸಂಭವಿಸಬಹುದೆಂಬ ಆತಂಕ ವ್ಯಕ್ತವಾಗಿದೆ.
ಸಿಸಿಬಿ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಸೂಕ್ತ ಸುರಕ್ಷತಾ ಕ್ರಮಗಳು ಅನುಸರಿಸಲಾಗುತ್ತಿದೆಯೇ? ದಾಸ್ತಾನಿಗೆ ಬೇಕಾದ ಅಧಿಕೃತ ಅನುಮತಿ ಹೊಂದಿದ್ದಾರೇಯೆ? ಎಂಬುದರ ಕುರಿತು ತನಿಖೆ ಪ್ರಾರಂಭಿಸಲಾಗಿದೆ. ಈ ಅಕ್ರಮ ದಾಸ್ತಾನು ಮತ್ತು ರೀ-ಫಿಲ್ಲಿಂಗ್ ಕಾರ್ಯದಲ್ಲಿ ತೊಡಗಿರುವವರ ವಿರುದ್ಧ ಶೀಘ್ರದಲ್ಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

