ಜೊತೆಯಲ್ಲೆ ಇದ್ದ ಗೆಳೆಯನಿಂದ ಅಡುಗೆ ಕಾರ್ಮಿಕನಿಗೆ ಗಂಭೀರ ಹಲ್ಲೆ.
ಬೆಂಗಳೂರು, ಜೂನ್ 21: ನಗರದ ಅಂಚೆಪೇಟೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಬಿಹಾರದ ಕಾರ್ಮಿಕನೊಬ್ಬನಿಗೆ ಜೊತೆಯಲ್ಲೆ ಇದ್ದ ಗೆಳೆಯನೇ ತೀವ್ರ ಹಲ್ಲೆ ಮಾಡಿರುವ ಘಟನೆ ಬೆಳಿಗ್ಗೆ ಬೆಳಕಿಗೆ ಬಂದಿದೆ.ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ ನಾಗೇಂದ್ರ ಎಂಬುವರು ಮೂಲತಃ ಬಿಹಾರ ರಾಜ್ಯದ ಸೀತಾಮಧಿ ಜಿಲ್ಲೆ, ನಾಗಪುರಠಾಣೆ ವ್ಯಾಪ್ತಿಗೆ ಸೇರಿರುವ ಸಿರಸಿ ಗ್ರಾಮದ ನಿವಾಸಿ. ಸುಮಾರು ಐದು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು, ದಿಲೀಪ್ ಎಂಬುವವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಇದ್ದರು. ಅವರೊಂದಿಗೆ ಚಿಕ್ಕಪೇಟೆಯ ಪ್ಯಾರಾಮೌಂಟ್ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕೆಲಸಮಾಡುವ ನಾಲ್ವರು ಸೇರಿ ಒಟ್ಟೂ ಐವರು ಒಂದೆ ಕೋಣೆಯಲ್ಲಿ ವಾಸಿಸುತ್ತಿದ್ದರು.ದಿನಾಂಕ ಜೂನ್ 17ರ ರಾತ್ರಿ 10 ಗಂಟೆ ವೇಳೆಗೆ ನಾಗೇಂದ್ರ ಅವರ ಹೆಂಡತಿಯ ತಂಗಿಯ ಮಗ ಶರವಣ್ ಹಾಗೂ ಇನ್ನೊಬ್ಬ ಸಹಪಾಟಿಯಾದ ಮನೀಶ್ ಕುಮಾರ್ ಚರೋಸಿಯಾ ನಡುವೆ ಗಲಾಟೆ ಉಂಟಾಗಿತ್ತು. ಬಳಿಕ ಊಟದ ನಂತರ ಎಲ್ಲರೂ ಮಲಗಿದ್ದರು. ನಾಗೇಂದ್ರ ಹಾಲ್ನಲ್ಲಿ ಮಲಗಿದ ಸಂದರ್ಭದಲ್ಲಿ, ದಿನಾಂಕ 18 ರಂದು ಬೆಳಗಿನ ಜಾವ 1:30ರ ಸುಮಾರಿಗೆ ಅವರ ಕತ್ತಿನ ಬಲಭಾಗದಲ್ಲಿ ತೀವ್ರ ನೋವು ಉಂಟಾಗಿ ಎಚ್ಚರಗೊಂಡರು. ನೋವಿನ ಮೂಲ ನೋಡಿದಾಗ, ಯಾರೋ ಹರಿತವಾದ ಆಯುಧದಿಂದ ಹೊಡೆದು ರಕ್ತಗಾಯ ಮಾಡಿಕೊಂಡಿರುವುದು ತಿಳಿದುಬಂದಿತು.ಅವರ ಸಹಪಾಟಿ ರೋಹಿತ್ ಅವರ ಸಹಾಯದಿಂದ ತಕ್ಷಣ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆಯ ಬಳಿಕ ಮನೀಶ್ ಕುಮಾರ್ ಚರೋಸಿಯಾ ನಾನೇ ಹೊಡೆದಿದ್ದೆನೆಂದು ಒಪ್ಪಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಸಿಟಿ ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ಇನ್ನೂ ಹೊರಬಿದ್ದಿಲ್ಲ.

