ಬೃಹತ್ ಉದ್ಯಮ ವಂಚನೆ: ಇಬ್ಬರು ಆರೋಪಿಗಳಿಂದ ಕೋಟ್ಯಂತರ ಮೊತ್ತ, ಮೋಸ….
ಉದ್ಯಮದ ಹೆಸರಿನಲ್ಲಿ ನಂಬಿಕೆ ಮೂಡಿಸಿ ಹೂಡಿಕೆದಾರರಿಂದ ಕೋಟ್ಯಾಂತರ ಹಣ ಪಡೆದು ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೌತಮ್ ಪಿ.ಕೆ. ಅವರು ನೀಡಿದ ಮಾಹಿತಿಯಂತೆ, 2019ರ ಡಿಸೆಂಬರ್‌ನಲ್ಲಿ ಎಂ.ಜಿ. ರಸ್ತೆಯಲ್ಲಿನ ತಮ್ಮ ಅಣ್ಣನ ಆಫೀಸ್‌ನಲ್ಲಿ ಜಯರಾಮ್ ಹಾಗೂ ರೋಷನ್ ಎಂಬುವವರನ್ನು ಭೇಟಿಯಾಗಿದ್ದರು. ಜಯರಾಮ್ ತನ್ನನ್ನು “ಮಾಜಿ ಗವರ್ನರ್ ಸೆಕ್ರೇಟರಿ” ಎಂದು ಪರಿಚಯಿಸಿ, “ಆಲ್ ಇಂಡಿಯಾ ರೋಬೋಟಿಕ್ ಎಜ್ಯುಕೇಶನ್” ಎಂಬ ಹೆಸರಿನಲ್ಲಿ ಬೃಹತ್ ಕೇಂದ್ರ ಸರ್ಕಾರಿ ಟೆಂಡರ್ ಬಗ್ಗೆ ಭರವಸೆ ನೀಡಿದ್ದಾರೆ.
ಹೀಗೆಯೇ ₹3 ಕೋಟಿ ಮೊತ್ತದ ಬಂಡವಾಳ ಬೇಕೆಂದು ಹೇಳಿ, ಆರೋಪಿಗಳು ಗೌತಮ್ ಹಾಗೂ ಆತನ ಸಹ ಹೂಡಿಕೆದಾರರಿಂದ ಹಂತ ಹಂತವಾಗಿ ₹2,50,53,400/- ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಈ ಹಣವನ್ನು ಹೂಡಿಕೆ ಮಾಡಿ ಲಾಭ ಹಂಚಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು.
ಹೆಚ್ಚಿನ ಲಾಭದ ನಂಬಿಕೆಯಿಂದ ‘SKILLSCULPT LLP’ ಎಂಬ ಕಂಪನಿಯನ್ನು ಸ್ಥಾಪನೆಗೊಳಿಸಿ, ಖಾತೆ ಮೂಲಕ ಹಣ ಪಡೆದುಕೊಂಡರೂ, ಆದರೆ ಯಾವುದೇ ಬಿಸಿನೆಸ್ ಪ್ರಾರಂಭವಾಗಿಲ್ಲ. ಗೌತಮ್ ಹಾಗು ಸಹ ಹೂಡಿಕೆದಾರರು ಹಣದ ವಿಚಾರವಾಗಿ ಪ್ರತಿಕ್ರಿಯಿಸಿದಾಗ , ಆರೋಪಿಗಳು ಬೆದರಿಕೆ ಒಡ್ಡಿ ,ಹಣವನ್ನು ಸಹ ವಾಪಸ್ ನೀಡದೆ ಎಲ್ಲೋ ತಲೆಮರೆಸಿಕೊಂಡಿದ್ದಾರೆ. ಅವರು ಇನ್ನಷ್ಟು ಜನರನ್ನು ಸಹ ಇದೇ ರೀತಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅವರನ್ನು ಎಲ್ಲೆ ಇದ್ದರು ಪತ್ತೆ ಹಚ್ಚಿ ತಮ್ಮ ಹಣವನ್ನು ಹಿಂತಿರುಗಿಸುವಂತೆ ಹಾಗೆಯೆ ಅವರ ತಪ್ಪಿಗೆ ತಕ್ಕ ಶಿಕ್ಷೆ ನೀಡುವಂತೆ ಕೇಳಿಕೊಂಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

