ಸುದ್ದಿ 

ಗೋಡಾನ್ ಮೇಲೆ ನಾಲ್ವರು ಅಪರಿಚಿತರ ದಾಳಿ: ಕಾರ್ಮಿಕನಿಗೆ ಹಲ್ಲೆ, ಚಾಕುವಿನಿಂದ ಬೆದರಿಕೆ…

Taluknewsmedia.com

ಬೆಂಗಳೂರು, ಜೂನ್ 22: ನಗರದ ಮಾರುತಿ ಟೈಲ್ಸ್ ಗೋಡಾನ್ ನಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ, ಕಾರ್ಮಿಕನಿಗೆ ಹಲ್ಲೆ ನಡೆಸಿದ ಹಾಗೂ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಶ್ರೀ ಸದಾನಂದ ಅವರು ಕೊಟ್ಟಿರುವ ದೂರಿನ ಪ್ರಕಾರ, ಅವರು ಕಳೆದ ಐದು ವರ್ಷಗಳಿಂದ ಗೋಡಾನ್ ನಲ್ಲಿ ವಾಸವಿದ್ದು ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಗೋಡಾನ್ ನಲ್ಲಿ ಆಸ್ಸಾಂ ಮೂಲದ ಆರು ಕಾರ್ಮಿಕರು ಸಹ ವಾಸವಿದ್ದು, ಕೆಲಸ ಮಾಡುತ್ತಿದ್ದಾರೆ.

ದಿನಾಂಕ 18-06-2025 ರಂದು ಸಂಜೆ 6.45ರ ಸುಮಾರಿಗೆ, ಗೋಡಾನ್ ಮುಂದೆ ನಾಲ್ವರು ಅಪರಿಚಿತರು ನಿಂತು ಶಂಕಿಸಬಹುದಾದ ಚಲನವಲನಗಳಲ್ಲಿ ತೊಡಗಿದ್ದರು. ಈ ವೇಳೆ ಸದಾನಂದ ಹಾಗೂ ಕಾರ್ಮಿಕ ರಾಜು ಚೌಹಾಣ್ ಅವರು ಗೋಡಾನ್ ಗೇಟ್ ಬಳಿ ಹೋದಾಗ, ಆ ವ್ಯಕ್ತಿಗಳಲ್ಲಿ ಒಬ್ಬರು “ಏ ಬಾರೋಲೇ” ಎಂದು ಕೂಗಿದ್ದು, ಪ್ರತಿಕ್ರಿಯೆ ನೀಡಿದ ತಕ್ಷಣ ನಾಲ್ವರೂ ಏಕಾಏಕಿ ದೌಡಾಯಿಸಿ ಬಲವಂತವಾಗಿ ಗೋಡಾನ್ ಒಳಗೆ ಪ್ರವೇಶಿಸಿದ್ದಾರೆ.

ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ರಾಜು ಚೌಹಾಣ್ ಅವರನ್ನು ಎದೆಗೆ ಹೊಡೆದು ನೆಲಕ್ಕೆ ಬೀಳಿಸಿ, ಕಾಲಿನಿಂದ ಒದ್ದಿದ್ದಾರೆ. ಹಾಗೆಯೆ ಚಾಕುವನ್ನು ತೋರಿಸಿ, “ಈ ಗೋಡಾನ್ ಖಾಲಿ ಮಾಡಬೇಕು, ಇಲ್ಲವೇ ನಿಮ್ಮನ್ನ ಕೊಲ್ಲುತ್ತೇವೆ” ಎಂದು ಭಯಭೀತಗೊಳಿಸಿದ್ದಾರೆ. ಟೈಲ್ಸ್ ಗಳನ್ನು ಹಾನಿಗೊಳಿಸುತ್ತೇವೆ ಎಂಬಂತೆಯೂ ಬೆದರಿಕೆಯೊಡ್ಡಿದ್ದಾರೆ.

ಈ ವೇಳೆ ಗೋಡಾನ್ ನ ಕಾರ್ಮಿಕರಾದ ಶ್ರೀನಾಥ್, ಆನಂದ್ ಮತ್ತು ಚಂದ್ರು ಸ್ಥಳಕ್ಕೆ ಬಂದಾಗ, ಅಪರಿಚಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದ ರಾಜು ಚೌಹಾಣ್ ಅವರನ್ನು ಆಟೋ ಡ್ರೈವರ್ ಆನಂದ್ ಅವರು ಜಯನಗರ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸದಾನಂದ ರವರು ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಆಧಾರದಲ್ಲಿ ಬನಶಂಕರಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ..

Related posts