ಮಧ್ಯರಾತ್ರಿ ಯುವತಿಯ ಮನೆ ಮೇಲೆ ದಾಳಿ: ಮಾಜಿ ಪ್ರೇಮಿಯಿಂದ ಕಿರುಕುಳ, ಹಲ್ಲೆ ಯತ್ನ..
ಒಂದು ಕಾಲದ ಪ್ರೇಮಿ ಮಧ್ಯರಾತ್ರಿ ಯುವತಿಯ ಮನೆಗೆ ನುಗ್ಗಿ ಕಿರುಕುಳ ನೀಡಿದ ಹಾಗೂ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ಯುವತಿ ವೈಷ್ಣವಿ ಅವರು ಹನುಮಂತನಗರದ ಪೊಲೀಸರಿಗೆ ದೂರು ನೀಡಿದ್ದು, ಯೋಗೇಶ್ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವೈಷ್ಣವಿಯವರ ಮಾಹಿತಿ ಪ್ರಕಾರ, ವೈಷ್ಣವಿ ಮತ್ತು ಯೋಗೇಶ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯೋಗೇಶ್ ನಡತೆ ಸರಿ ಇಲ್ಲದ ಕಾರಣ ಸಂಬಂಧ ಮುರಿದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಯೋಗೇಶ್ ನಿರಂತರವಾಗಿ ವಿವಿಧ ಅಪರಿಚಿತ ನಂಬರ್‌ಗಳಿಂದ ಕರೆಮಾಡಿ ಅವಳಿಗೆ ಕಿರುಕುಳ ನೀಡುತ್ತಿದ್ದನು.
ದಿನಾಂಕ 20ರಂದು ರಾತ್ರಿ ಸುಮಾರು 12:30ರ ಸುಮಾರಿಗೆ, ಯೋಗೇಶ್ ವೈಷ್ಣವಿಯ ಮನೆಯ ಬಳಿಗೆ ಬಂದು ಜೋರಾಗಿ ಕೂಗಾಡುತ್ತಿದ್ದನು. ಈ ವಿಷಯವನ್ನು ತಾಯಿ ಗಮನಿಸಿದಾಗ, ಯಾಕೆ ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಿದಕ್ಕೆ ಅವನು ಅವಾಚ್ಯ ಶಬ್ದಗಳಿಂದ ಬೈದು, ಸಮೀಪದಲ್ಲಿದ್ದ ಕಲ್ಲಿನಿಂದ ವೈಷ್ಣವಿಯ ಅಣ್ಣನ ಆಟೋಗೆ ಹೊಡೆದು ಹಾನಿ ಮಾಡಿದ್ದನು.
ಅದೇ ರಾತ್ರಿ, ಸುಮಾರು 15 ನಿಮಿಷಗಳ ಬಳಿಕ, ಯೋಗೇಶ್ ಮತ್ತೊಬ್ಬ ಅಪರಿಚಿತನೊಂದಿಗೆ ಲಾಂಗ್ ಹಿಡಿದು ಮನೆ ಎದುರು ಬಂದು ಗಲಾಟೆ ನಡೆಸಿದ್ದು, ಲಾಂಗ್‌ನಿಂದ ಕಿಟಕಿಯ ಗಾಜು ಒಡೆದು, ಬಾಗಿಲನ್ನು ಹೊಡೆದು ಮನೆಯೊಳಗೆ ನುಗ್ಗಿ ಹಲ್ಲೆ ಮಾಡಲು ಯತ್ನಿಸಿದ್ದಾನೆ. ನಂತರ ಮನೆ ಬಿಟ್ಟು ಹೋಗುವಾಗ ಮತ್ತೊಮ್ಮೆ ಆಟೋಗೆ ಹಾನಿ ಮಾಡಿ, ಮನೆಯವರಿಗೆ ಜೀವ ಬೆದರಿಕೆ ಹಾಕಿದ ಆರೋಪ ಇದೆ.
ಈ ಕುರಿತು ಹನುಮಂತನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ, ವೈಷ್ಣವಿ ಯು ಯೋಗೇಶ್ ಮತ್ತು ಅವನ ಸ್ನೇಹಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭವಾಗಿದೆ.