ರಿಹಾಬಿಲಿಟೇಷನ್ ಸೆಂಟರ್‌ನಲ್ಲಿ ವ್ಯಕ್ತಿಯ ಆತ್ಮಹತ್ಯೆ? ಕುಟುಂಬಸ್ಥರಿಂದ ಅನುಮಾನ ವ್ಯಕ್ತ.
ಯಲಹಂಕದ ಬಳಿ ಇರುವ ಖಾಸಗಿ ಜಾಗೃತಿ ರಿಹಾಬಿಲಿಟೇಷನ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಇಗ್ನಿಸಿಯಸ್ ಸಭಾಸ್ಟಿಯನ್ ಪರ್ಟಾಡೋ ಎಂದು ಗುರುತಿಸಲಾಗಿದ್ದು, ಅವರು ಮದ್ಯಪಾನ ವ್ಯಸನದಿಂದ ಪೀಡಿತರಾಗಿದ್ದರಿಂದ ದಿನಾಂಕ 11 ಜೂನ್ 2025 ರಂದು ರಿಹಾಬ್ ಸೆಂಟರ್‌ಗೆ ದಾಖಲಿಸಲಾಗಿತ್ತು.
ದಿನಾಂಕ 16 ಜೂನ್ 2025 ರಂದು ಸಂಜೆ 6:30ರ ವೇಳೆಗೆ ರಿಹಾಬ್ ಸಿಬ್ಬಂದಿಯಿಂದ ಮೃತರ ಕುಟುಂಬಕ್ಕೆ ಕರೆ ಮಾಡಿ, ಅವರು ತಮ್ಮ ಬೆಲ್ಟ್ ಬಳಸಿ ನೇಣು ಬಿಗಿದುಕೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ತಕ್ಷಣ ಚಿಕಿತ್ಸೆ ನೀಡಿದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಮೃತರ ಸಹೋದರರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಈ ಘಟನೆಯ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. “ಸೆಂಟರ್‌ನಲ್ಲಿ ಮೊಬೈಲ್ ಚಾರ್ಜರ್, ವೈರ್, ಬ್ಲೇಡ್ ಮುಂತಾದ ಆತ್ಮಹತ್ಯೆಗೆ ಬಳಸಬಹುದಾದ ವಸ್ತುಗಳನ್ನು ವಾಪಸ್ ಪಡೆದುಕೊಂಡು, ಬೆಲ್ಟ್ ಅನ್ನು ಮಾತ್ರ ಯಾಕೆ ಬಿಟ್ಟಿದ್ದರು?” ಎಂಬ ಪ್ರಶ್ನೆ ಎತ್ತಿದ್ದಾರೆ.
ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣವನ್ನು FIR ನಂ. 178/2025 ಅಡಿಯಲ್ಲಿ ದಾಖಲಿಸಿ ತನಿಖೆ ಕೈಗೊಂಡಿದ್ದು, ರಿಹಾಬ್ ಸೆಂಟರ್ ಸಿಬ್ಬಂದಿಯಿಂದ ಕೂಡ ತನಿಖೆ ನಡೆಯಲಿದೆ.

