ದೇವಾಲಯದಲ್ಲಿ ಕಳ್ಳತನ: 40 ಗ್ರಾಂ ಚಿನ್ನದ ಆಭರಣ ಕಳವು, ಅರ್ಚಕರಿಂದ ದೂರು..
ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿಯ ಜೋಡಿ ನೇರಲಕೆರೆ ಗ್ರಾಮದ ಶ್ರೀ ಪಟ್ಟಲದಮ್ಮ ದೇವಾಲಯದಲ್ಲಿ ಕಳ್ಳತನದ ಘಟನೆ ಸಂಭವಿಸಿದೆ. ಈ ಕುರಿತು ದೇವಾಲಯದ ಅರ್ಚಕರೂ ಆಗಿರುವ ಮಹದೇವಪ್ಪ ಎನ್.ಡಿ. (47), ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮಹದೇವಪ್ಪ ಅವರು ನೀಡಿದ ಮಾಹಿತಿಯಂತೆ, ದೇವಾಲಯವು ಗ್ರಾಮದಿಂದ ಒಂದು ಕಿಲೋಮೀಟರ್ ದೂರದ ಪೂರ್ವ ದಿಕ್ಕಿನಲ್ಲಿ ಇದೆ. ಪ್ರತಿದಿನದಂತೆ ಅವರು ಪೂಜೆ ಮುಗಿಸಿ, ದೇವಸ್ಥಾನದ ಮುಂಭಾಗದ ಕಬ್ಬಿಣದ ಬಾಗಿಲಿಗೆ ಬೀಗ ಹಾಕಿ ಮನೆಗೆ ಹಿಂದಿರುಗಿದ್ದರು.ಆದರೆ, ಮುಂದಿನ ಅವರು ದೇವಸ್ಥಾನಕ್ಕೆ ಹೋದಾಗ, ಬಾಗಿಲು ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ದೇವಾಲಯದ ಒಳಾಂಗಣದಲ್ಲಿ ಇಟ್ಟಿದ್ದ ಕಬ್ಬಿಣದ ಬೀರುವಿನ ಲಾಕರ್ ಕೂಡ ಮುರಿಯಲ್ಪಟ್ಟಿದ್ದು, ಅದರಲ್ಲಿ ಇಟ್ಟಿದ್ದ ದೇವರ ಸೀರೆ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, ಲಾಕರ್ ತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ. ದೇವಸ್ಥಾನದ ಒಳಾಂಗಣದಲ್ಲಿ ಇಟ್ಟಿದ್ದ ಕಬ್ಬಿಣದ ಗೋಲಕವನ್ನು ಪಕ್ಕದ ಪೊದೆಯೊಳಗೆ ಎಸೆದು ಹಾಕಲಾಗಿತ್ತು.ಪರಿಶೀಲನೆ ನಡೆಸಿದಾಗ, ದೇವಾಲಯದ ಉತ್ಸವ ಹಾಗೂ ವಿಶೇಷ ದಿನಗಳಲ್ಲಿ ಉಪಯೋಗಿಸುತ್ತಿದ್ದ 25 ಗ್ರಾಂ ತೂಕದ ಚಿನ್ನದ ನೆಕ್‌ಲೇಸ್ ಮತ್ತು ಮೂರ್ತಿ ಮೇಲೆ ಧರಿಸಲ್ಪಟ್ಟ 15 ಗ್ರಾಂ ತೂಕದ ಮೂರು ಚಿನ್ನದ ತಾಳಿಗಳನ್ನು ಕಳ್ಳರು ಕದ್ದೊಯ್ಯಿರುವುದು ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಸುಮಾರು 40 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಲಾಗಿದ್ದು, ಅವುಗಳ ಮೌಲ್ಯ ಅಂದಾಜು ರೂ. 2.5 ಲಕ್ಷವಾಗುತ್ತದೆ ಎಂದು ತಿಳಿಸಿದ್ದಾರೆ.ಸ್ಥಳೀಯ ಮುಖಂಡರು ಮತ್ತು ದೇವಸ್ಥಾನದ ಸಮಿತಿಯವರೊಂದಿಗೆ ಚರ್ಚೆಯ ನಂತರ ಅರ್ಚಕರು ನಾಗಮಂಗಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ವರದಿ : ಧನುಷ್ ಎ ಗೌಡ ಕಾಚೇನಹಳ್ಳಿ ತಾಲೂಕ್ ನ್ಯೂಸ್

