ಸುದ್ದಿ 

ಜಮೀನಿನ ವಿವಾದದಿಂದ ರಸ್ತೆಯಲ್ಲಿ ಘರ್ಷಣೆ – 9 ಮಂದಿ ಬಂಧನ

Taluknewsmedia.com

ಬೆಂಗಳೂರು, ಜುಲೈ 16:2025


ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಜಮೀನಿನ ಸಂಬಂಧಿತ ವಿಚಾರದ ಹಿನ್ನೆಲೆಯಲ್ಲಿ ಸಂಬಂಧಿಕರೇ ಒಬ್ಬರ ಮೇಲೆ ಒಬ್ಬರು ಹಲ್ಲೆ ನಡೆಸಿದ ಪ್ರಕರಣ ಸಂಭವಿಸಿದ್ದು, ಒಟ್ಟು 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿದ್ಯಾರಣ್ಯಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ನಂದೀಶ್ ಹಾಗೂ ಪಿಸಿ ನಿಸ್ಸಾರ್ ಖಾನ್ ಅವರು ಬೆಳಿಗ್ಗೆ 8.30ರ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಗಸ್ತು ಕಾರ್ಯದೊಂದಿಗೆ ಸಂಭ್ರಮ ಕಾಲೇಜು ಸಮೀಪದ ರಸ್ತೆಯ ಮೂಲಕ ಅಂಬಾ ಭವಾನಿ ದೇವಸ್ಥಾನದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸಾರ್ವಜನಿಕ ರಸ್ತೆಯಲ್ಲಿ 8-9 ಮಂದಿ ಎರಡು ಗುಂಪುಗಳಾಗಿ ಕೈಕಾಲು ಬೀಸಿ ಜಗಳವಾಡುತ್ತಿದ್ದ ದೃಶ್ಯ ಗಮನಕ್ಕೆ ಬಂದಿದೆ.

ತಕ್ಷಣ ಘಟನಾ ಸ್ಥಳಕ್ಕೆ ಸೇರಿ ಜಗಳ ತಡೆಯುವಲ್ಲಿ ಸಕ್ರಿಯರಾದ ಅವರು, ಕೂಡಲೇ ಹೊಯ್ಸಳ 169 ವಾಹನದ ಸಹಾಯದಿಂದ ಎಸ್‌ಐ ಸರೋಜ ಹಾಗೂ ಎಪಿಸಿ ರುದ್ರೇಶ್ ಫಿರಂಗಿ ಅವರನ್ನು ಕರೆಸಿದರು. ಬಳಿಕ ಜಗಳದಲ್ಲಿ ಭಾಗವಹಿಸಿದ್ದ ಎಲ್ಲಾ 9 ಮಂದಿಯನ್ನು ಠಾಣೆಗೆ ಕರೆತರಲಾಯಿತು.

ಬಂಧಿತರು – ರೂಪೇಶ್ ಗೋಸ್ವಾಮಿ (28), ಅವತಾರ್ ಗೋಸ್ವಾಮಿ (35), ಯಾದವ್ ಗೋಸ್ವಾಮಿ (42), ಮುಖೇಶ್ ಗೋಸ್ವಾಮಿ (42), ರೇಖಾ ಗೋಸ್ವಾಮಿ (38), ನಂದಕಿಶೋರ್ ಗೋಸ್ವಾಮಿ (32), ಶಿವಾನಿ ಗೋಸ್ವಾಮಿ (25), ಬಿಹಾರಿ ಗೋಸ್ವಾಮಿ (33) ಹಾಗೂ ರಕ್ಷಾ ಗೋಸ್ವಾಮಿ (29) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಧ್ಯಪ್ರದೇಶ ಮೂಲದವರಾಗಿದ್ದು, ಕುಟುಂಬದ ಜಮೀನಿಗೆ ಸಂಬಂಧಿಸಿದ ಮಾತುಕತೆ ವೇಳೆ ಮಾತಿಗೆ ಮಾತು ಬೆಳೆದು ಸಾರ್ವಜನಿಕವಾಗಿ ಜಗಳವಾಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಶಾಂತಿಗೆ ಧಕ್ಕೆಯಾಗುವ ರೀತಿಯಲ್ಲಿ ವರ್ತನೆ ತೋರಿದ ಕಾರಣ, ಸಂಬಂಧಪಟ್ಟ ವಿಧಾನದಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದ್ದಾರೆ.

Related posts