ಸುದ್ದಿ 

ನೆರಿಗಾ ಗ್ರಾಮದ ಸರ್ಕಾರಿ ಜಮೀನಿನಲ್ಲಿ ತ್ಯಾಜ್ಯ ಸುರಿಯುವ ಅಕ್ರಮ: ಗ್ರಾಮಸ್ಥರ ಆಕ್ರೋಶ

Taluknewsmedia.com

ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ನೆರಿಗಾ ಗ್ರಾಮದ ಸರ್ವೆ ನಂ. 24 ರಲ್ಲಿನ ಸರ್ಕಾರಿ ಜಮೀನಿನಲ್ಲಿ ತ್ಯಾಜ್ಯ ಹಾಗೂ ಮಲೀನ ಪದಾರ್ಥಗಳನ್ನು ಲಾರಿಗಳ ಮೂಲಕ ಅಕ್ರಮವಾಗಿ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ.

ಒಟ್ಟು 6 ಎಕರೆ 05 ಗುಂಟೆಯಷ್ಟು ಜಮೀನಿನ ಪೈಕಿ 4 ಎಕರೆ 10 ಗುಂಟೆ ಭಾಗ ಖರಾಬು ಜಾಗವಾಗಿದ್ದು, ಅದನ್ನು ನಿರ್ಲಕ್ಷ್ಯವಾಗಿ ಕಸ ಸುರಿವ ಸ್ಥಳವಾಗಿ ಬಳಸಲಾಗುತ್ತಿದೆ. ಸ್ಥಳೀಯರು ನೀಡಿದ ದೂರಿನ ಪ್ರಕಾರ, ಪ್ರವೀಣ್ ಕುಮಾರ್ ಬಿನ್ ಕೃಷ್ಣಪ್ಪ, ವೆಂಕಟೇಶ್ ಬಿನ್ ಲೇ. ನರಸಿಂಹ, ಮತ್ತು ಕಿಶೋರ್ ಬಿನ್ ಶಿವ ಎಂಬವರು ಬಿಬಿಎಂಪಿಯಿಂದ ತ್ಯಾಜ್ಯವನ್ನು ಲಾರಿಗಳ ಮೂಲಕ ತಂದು, ಕಾನೂನುಬಾಹಿರವಾಗಿ ಜಮೀನಿನಲ್ಲಿ ಸುರಿಸುತ್ತಿದ್ದಾರೆ.

ದಿನಾಂಕ 25 ಜುಲೈ 2025ರ ರಾತ್ರಿ, KA-51-5-1045, KA-05-2-5938 ಮತ್ತು KA-53-AB-1919 ಸಂಖ್ಯೆಯ ವಾಹನಗಳಲ್ಲಿ ತ್ಯಾಜ್ಯವನ್ನು ಮರಳಿಸುವಾಗ ಗ್ರಾಮಸ್ಥರು ಸ್ಥಳದಲ್ಲೇ ಲಾರಿಗಳನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾತಿ ನಡೆಯುತ್ತಿದೆ.

ಗ್ರಾಮಸ್ಥರ ಪ್ರಕಾರ, ಕಸದ ದುರ್ವಾಸನೆ, ಪರಿಸರ ಮಾಲಿನ್ಯ ಹಾಗೂ ಜೀವಜಂತುಗಳ ಹಾವಳಿ ಏರಿಕೆಯಾಗಿದೆ. ಬಹುಮಟ್ಟಿಗೆ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಅವರು ಪೊಲೀಸ್ ಇಲಾಖೆಯ ಜೊತೆಗೆ ತಹಶೀಲ್ದಾರ್ ಹಾಗೂ ಪೌರಾಡಳಿತ ಇಲಾಖೆ ಗಮನ ಸೆಳೆಯುತ್ತಿದ್ದಾರೆ.

ಸ್ಥಳೀಯರು ಹಲವಾರು ಬಾರಿ ಆರೋಪಿಗಳಿಗೆ ಎಚ್ಚರಿಕೆ ನೀಡಿದರೂ ಅವರು ತಮ್ಮ ಅಕ್ರಮ ಕ್ರಿಯೆಗಳನ್ನು ನಿಲ್ಲಿಸದೆ ಮುಂದುವರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

Related posts