ಯಲಹಂಕದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಹತ್ತಿಸಿಕೊಂಡ ಆರೋಪ – ಐವರು ವಿರುದ್ಧ ಎಫ್ಐಆರ್
ಬೆಂಗಳೂರು, ಜುಲೈ 30, 2025:
ಯಲಹಂಕದ ಸಿಂಗುಪುರ ಗ್ರಾಮದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸವಿದ್ದ ವ್ಯಕ್ತಿಯೊಬ್ಬರ ಮೇಲೆ, ನಕಲಿ ದಾಖಲೆಗಳ ಆಧಾರದ ಮೇಲೆ ಹಕ್ಕು ಪಡೆದಿರುವುದಾಗಿ ತೋರಿಸಿಕೊಂಡು ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿರುವ ಐವರು ವಿರುದ್ಧ ವಿದ್ಯಾರಣ್ಯಪುರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪಿರ್ಯಾದಿದಾರರು ಕುವೆಂಪುನಗರದ ಸಿಂಗುಪುರದಲ್ಲಿ ಸರ್ವೆ ನಂ.109 ರಲ್ಲಿರುವ 600 ಚದರ ಅಡಿಯ ಜಾಗದಲ್ಲಿ ಮನೆ ನಿರ್ಮಿಸಿ ತಮ್ಮ ತಾಯಿಯ ಹೆಸರಲ್ಲಿ 2016 ರಲ್ಲಿ ಅನಧಿಕೃತ ಕಟ್ಟಡಕ್ಕೆ regularisation ಅರ್ಜಿ ಸಲ್ಲಿಸಿದ್ದರು. ಆದರೆ 2023 ರಲ್ಲಿ ಅವರ ತಾಯಿ ಮೃತರಾದ ನಂತರ, 2024 ರ ಜನವರಿಯಲ್ಲಿ ನಾಲ್ಕು ಮತ್ತು ಐದನೇ ಆರೋಪಿಗಳು ಈ ಭೂಮಿ ಖರೀದಿಸಿದ್ದೇವೆಂದು ತೀವ್ರವಾಗಿ ಬೆದರಿಕೆ ಹಾಕತೊಡಗಿದರು.
ಪಿರ್ಯಾದಿದಾರರು ದಾಖಲೆ ಪರಿಶೀಲನೆ ನಡೆಸಿದಾಗ, ಆರೋಪಿಗಳು ನಕಲಿ ಹಕ್ಕುಪತ್ರ, ಪರವಾನಗಿ ಮತ್ತು ಖಾತಾ ನಂಬರ್ಗಳನ್ನು ಸೃಷ್ಟಿಸಿಕೊಂಡು, ಈ ಜಮೀನನ್ನು 1974 ರಲ್ಲಿ ಮೊದಲನೇ ಆರೋಪಿಗೆ ಮಂಜೂರಾಗಿದೆಯೆಂದು ಖರೀದಿ ದಾಖಲೆ (Sale Deed) ಸಿದ್ಧಪಡಿಸಿದ್ದಾಗಿ ತಿಳಿದುಬಂದಿದೆ. ಯಲಹಂಕ ಸಬ್ ರೆಜಿಸ್ಟ್ರಾರ್ ಕಚೇರಿಯಲ್ಲಿ 01.01.2024 ರಂದು ದಾಖಲೆ ಸಂಖ್ಯೆ YAN-1-12448 ಮೂಲಕ ಈ ಡೀಡ್ ದಾಖಲಾಗಿದೆ.
ಸಬ್ ರೆಜಿಸ್ಟ್ರಾರ್ ಕಚೇರಿ ದಾಖಲೆ ಪರಿಶೀಲನೆ ವೇಳೆ, ಮೊದಲನೇ ಆರೋಪಿಗೆ ಜಮೀನು ಮಂಜೂರು ಮಾಡಲಾಗಿಲ್ಲ ಎಂಬುದು ದೃಢಪಟ್ಟಿದ್ದು, ಈ ನಕಲಿ ದಾಖಲೆಗಳ ಆಧಾರದಲ್ಲಿ ಜಮೀನು ಖಾಲಿ ಮಾಡಿಸುವಂತೆ ಬೆದರಿಕೆ ಹಾಕಿರುವ ಆರೋಪಕ್ಕೆ ಗಂಭೀರತೆ ಇತ್ತು. ವಿದ್ಯಾರಣ್ಯಪುರ ಪೊಲೀಸರ ಪ್ರಾಥಮಿಕ ತನಿಖೆಯ ಬಳಿಕ ಪ್ರಕರಣವನ್ನು ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

