ಯಲಹಂಕ ಅಪಾರ್ಟ್‌ಮೆಂಟ್‌ನಲ್ಲಿ ಬಟ್ಟೆ ಒಣಗಿಸುವ ವಿಚಾರಕ್ಕೆ ಜಗಳ: ಮಹಿಳೆ ವಿರುದ್ಧ ದೈಹಿಕ ಹಲ್ಲೆ ಆರೋಪ
ಬೆಂಗಳೂರು, ಜುಲೈ 30 , 2025:
ನಗರದ ಯಲಹಂಕ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ಬಟ್ಟೆ ಒಣಗಿಸುವ ಸ್ಥಳದ ವಿಚಾರದಿಂದ ಜಗಳ ಉಂಟಾಗಿ, ಮಹಿಳೆಯೊಬ್ಬರು ತಮ್ಮ ನೆರೆಹೊರೆಯವರಿಂದ ದೈಹಿಕ ಹಲ್ಲೆಗೆ ಒಳಗಾದ ಘಟನೆ ನಡೆದಿದೆ. ಈ ಸಂಬಂಧ ಸಂಬಂಧಿತ ಮಹಿಳೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಶ್ವಿನಿ ಕೊಟ ಅವರ ಪ್ರಕಾರ, ಅವರು ಪ್ರತಿದಿನದಂತೆ ತಮ್ಮ ಬಟ್ಟೆಗಳನ್ನು ಅಪಾರ್ಟ್‌ಮೆಂಟ್‌ನ ನಿಗದಿತ ಸ್ಥಳದಲ್ಲಿ ಒಣಗಿಸಲು ಹಾಕಿದಾಗ, ಅದೇ ಜಾಗದಲ್ಲಿ ಪಾಯಲ್ ಎಂಬವರೂ ತಮ್ಮ ಹಸಿ ಬಟ್ಟೆಗಳನ್ನು ಹಾಕಿದ್ದರಂತೆ. ಈ ಬಗ್ಗೆ ಶಾಂತಿಯುತವಾಗಿ ಮಾತನಾಡಿದ ದೂರುದಾರರಿಗೆ, ಪಾಯಲ್ ಅವರು ಪ್ರತಿಕ್ರಿಯೆ ನೀಡುವ ಬದಲು ಕೂದಲು ಎಳೆದು, ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಮಹಿಳೆ, ಹಿಂದೆ ಪಾರ್ಕಿಂಗ್ ಜಾಗದ ವಿಷಯದಲ್ಲೂ ತಕರಾರು ಮಾಡಿದ್ದರಲ್ಲದೆ, ಕಿರುಕುಳ ನೀಡುತ್ತಿದ್ದಾಳೆ ಎನ್ನಲಾಗಿದೆ. ಇದರಿಂದ ದೂರುದಾರರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವಾಗುತ್ತಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಈ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

