ಫೇಸ್‌ಬುಕ್ ಲೋನ್ ವಂಚನೆ: 10 ಲಕ್ಷ ಲೋನ್ ಕೊಡುತ್ತೇನೆ ಎಂದು ನಂಬಿಸಿ ₹2.79 ಲಕ್ಷವರೆಗೆ ವಂಚನೆ – ಆರ್.ಟಿ.ನಗರದಲ್ಲಿ ಪ್ರಕರಣ
ಬೆಂಗಳೂರು, ಜುಲೈ 31:2025
ಫೇಸ್‌ಬುಕ್ ಮೂಲಕ 10 ಲಕ್ಷ ರೂಪಾಯಿ ಲೋನ್ ಕೊಡುತ್ತೇನೆ ಎಂದು ನಂಬಿಸಿ ಒಟ್ಟು ₹2,79,484 ರೂಪಾಯಿ ವಂಚಿಸಿದ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಶಾಲ್ ಗೌಡ ಅವರು ತಮ್ಮ ತಂದೆ-ತಾಯಿಯೊಂದಿಗೆ ಆರ್.ಟಿ.ನಗರದ ವಿಳಾಸದಲ್ಲಿ ವಾಸವಿದ್ದು, ಕುಟುಂಬದ ಜೀವನ ಸಾಗಿಸಲು ಕರ್ನಾಟಕ ಮಟನ್ & ಚಿಕನ್ ಸ್ಮಾಲ್ ಎಂಬ ಖಾಸಗಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಜುಲೈ 24 ರಂದು ಫೇಸ್‌ಬುಕ್‌ನಲ್ಲಿ Deepak Reddy ಎಂಬ ಖಾತೆಯಿಂದ “ಲೋನ್ ನೀಡಲಾಗುತ್ತದೆ” ಎಂಬ ಸಂದೇಶವನ್ನು ನೋಡಿದ ಅವರು ಅದರಲ್ಲಿರುವ ಮೊಬೈಲ್ ಸಂಖ್ಯೆ (9152862915)ಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದರು.
ಅವರೊಂದಿಗೆ ಮಾತನಾಡಿದ ಅಪರಿಚಿತ ವ್ಯಕ್ತಿ, 10 ಲಕ್ಷ ರೂಪಾಯಿ ಲೋನ್ ನೀಡುವುದಾಗಿ ನಂಬಿಸಿ, ವಿವಿಧ ದಾಖಲೆಗಳ ಹೆಸರಿನಲ್ಲಿ ಹಣ ಬೇಡುತ್ತಿದ್ದ. ಇದೇ ನೆಪದಲ್ಲಿ ಜುಲೈ 24ರಿಂದ 28ರ ನಡುವೆ ವಿವಿಧ ದಿನಗಳಲ್ಲಿ ₹40,730, ₹40,000, ₹42,555, ₹35,000 ಸೇರಿ, ಒಟ್ಟು ₹2,79,484 ಹಣವನ್ನು ಪಿರ್ಯಾದಿದಾರರು ತಮ್ಮ, ತಮ್ಮ ತಾಯಿ ಮತ್ತು ತಮ್ಮ ಸಹೋದರಿಯ ಖಾತೆಗಳಿಂದ ಪಾವತಿಸಿದರು.
ಆದರೆ ಲೋನ್ ಹಣವೇ ಬಾರದೇ, ಆ ವ್ಯಕ್ತಿ ಸಂಪರ್ಕ ಕಡಿತಗೊಳಿಸಿದಾಗ ವಂಚನೆ ನಡೆದಿರುವುದು ಸ್ಪಷ್ಟವಾಯಿತು. ಈ ಸಂಬಂಧ ಪಿರ್ಯಾದಿದಾರರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

