ಬಾಲಕನ ಅಪಹರಿಸಿ ಬರ್ಬರ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು..
ಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳಾಗಿ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು.
ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ್ ಕುಮಾರ್ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.ಘಟನೆಯಲ್ಲಿ ಗುರುಮೂರ್ತಿಯ ಎರಡೂ ಕಾಲುಗಳು ಮತ್ತು ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರು ಅರಕೆರೆಯ ಶಾಂತಿನಿಕೇತನ ಲೇಔಟ್ನಲ್ಲಿ ನಿಶ್ಚಿತ್ ಮತ್ತು ಅವನ ಪೋಷಕರು ವಾಸಿಸುತ್ತಿದ್ದರು. ನಿಶ್ಚಿತ್ನ ತಂದೆ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಗುರುಮೂರ್ತಿ ಅವರ ಜೊತೆ ಹೆಚ್ಚುವರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಭೇಟಿ ನೀಡುತ್ತಿದ್ದ. ಈ ವೇಳೆ ನಿಶ್ಚಿತ್ನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುವ ಸಂಚು ರೂಪಿಸಿದ್ದ ಎನ್ನಲಾಗಿದೆ.
ಅಪಹರಣದಿಂದ ಹತ್ಯೆ ತನಕ :
ಬುಧವಾರ ಸಂಜೆ ನಿಶ್ಚಿತ್ ಟ್ಯೂಷನ್ ಮುಗಿಸಿ ಸೈಕಲ್ನಲ್ಲಿ ಮನೆಗೆ ಬರುತ್ತಿದ್ದಾಗ ಆರೋಪಿಗಳು ಅಪಹರಿಸಿದ್ದರು. ಮಗ ಮನೆಗೆ ಬರದೇ ಇದ್ದ ಕಾರಣ ಪೋಷಕರು ಆತಂಕದಿಂದ ಹುಡುಕಾಟ ಆರಂಭಿಸಿದ್ದರು. ತಕ್ಷಣವೇ ಹುಳಿಮಾವು ಠಾಣೆಯಲ್ಲಿ ದೂರು ನೀಡಲಾಯಿತು. ಅಷ್ಟರಲ್ಲಾಗಲೇ ಪೋಷಕರಿಗೆ ಕರೆ ಮಾಡಿದ ಆರೋಪಿಗಳು, “ಮಗನನ್ನು ಜೀವಂತವಾಗಿ ನೋಡಬೇಕು ಎಂದರೆ ₹5 ಲಕ್ಷ ನೀಡಿ” ಎಂದು ಬೇಡಿಕೆ ಇಟ್ಟಿದ್ದರು. ಪೋಷಕರು ಹಣ ನೀಡುವುದಾಗಿ ಒಪ್ಪಿದರೂ, ಇದಕ್ಕೆ ಮೊದಲು ಬಾಲಕನ ಶವ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಪತ್ತೆಯಾಯಿತು.ಅವರನ್ನು ಗುರುತಿಸದಂತೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ ಘಟನೆಯೂ ನಡೆದಿದೆ.
ಈ ಬಗ್ಗೆ ಪೊಲೀಸ್ ತನಿಖೆಯಿಂದ ಶವದ ಸ್ಥಿತಿ ಬಹಳ ಭೀಕರವಾಗಿದೆ ಎಂದು ತಿಳಿದು ಬಂದಿದೆ.
ತನಿಖೆ ಮುಂದುವರಿದಿದೆ:
ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ನಾರಾಯಣ್ ಮತ್ತು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪರಾಧ ಹಿನ್ನೆಲೆ ಹೊಂದಿರುವ ಗುರುಮೂರ್ತಿ ಈ ಸಂಚು ರೂಪಿಸಿದ್ದ ಎನ್ನಲಾಗಿದೆ. ಈ ಕೃತ್ಯಕ್ಕೆ ಇನ್ನೂ ಯಾರಾದರೂ ಪಾಲುದಾರರಾಗಿದ್ದಾರಾ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

