ಜಮೀನಿನ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ: ವ್ಯಕ್ತಿಗೆ ಕಾರಿನಲ್ಲೇ ಬೀರ್ ಬಾಟಲ್ ದಿಂದ ಹಲ್ಲೆ
ಬೆಂಗಳೂರು, ಆ.6: 2025
ಜಮೀನಿನ ವ್ಯವಹಾರಕ್ಕೆ ಸಂಬಂಧಿಸಿದ ಮಾತಿಗೆ ಮಾತು ಬೆಳೆದು, ವ್ಯಕ್ತಿಯೊಬ್ಬನನ್ನು ಕಾರಿನೊಳಗೆ ಕೂರಿಸಿ ಮೂವರು ವ್ಯಕ್ತಿಗಳು ಸೇರಿ ಬರ್ಬರವಾಗಿ ಹಲ್ಲೆ ನಡೆಸಿದ ಘಟನೆ IVC ರಸ್ತೆಯ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೀಪಕ್ ಗೌಡ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಸ್ನೇಹಿತ ಕಿರಣ್ ಹಾಗೂ ಅವರ ಸ್ನೇಹಿತ ರವಿ ಜೊತೆಗೂಡಿ 01 ಆಗಸ್ಟ್ 2025ರಂದು ತಮ್ಮ 4 ಎಕರೆ ಜಮೀನನ್ನು ಸ್ಥಳದ ಡೆವಲಪ್ಮೆಂಟ್ ಉದ್ದೇಶದಿಂದ ತೋರಿಸಿದ್ದರು. ಆದರೆ ಜಮೀನಿಗೆ ಕಡಿಮೆ ಬೆಲೆ ಕೇಳಿದ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ವಾದವಿವಾದ ಉಂಟಾಗಿದೆ.
ದಿನಾಂಕ 02 ಆಗಸ್ಟ್ 2025ರಂದು ಬೆಳಿಗ್ಗೆ 11.30ಕ್ಕೆ, ರವಿ ತಮ್ಮ ಕಾರಿನಲ್ಲಿ ಬಂದು ಜಮೀನಿನ ಕುರಿತು ಮತ್ತೊಮ್ಮೆ ಮಾತನಾಡಲು ಕರೆದಾಗ, ಪಿರ್ಯಾದಿದಾರರು ತಮ್ಮ ಕಾರಿನಲ್ಲಿ ಅವರ ಹಿಂದೆ ಹೋಗಿದ್ದಾರೆ. ಅಂಬಾ ಭವಾನಿ ದೇವಾಲಯದ ಬಳಿ ಕಾರು ನಿಲ್ಲಿಸಿ, ರವಿಯ ಕಾರಿನಲ್ಲಿ ಕುಳಿತುಕೊಂಡ ನಂತರ, ರವಿಯ ಡ್ರೈವರ್ ಮಂಜು ಹಾಗೂ ಇನ್ನಿಬ್ಬರು ವ್ಯಕ್ತಿಗಳು ಅಚ್ಚರಿಯಾಗಿ ಕಾರಿನೊಳಗೆ ಬಂದು ಬಾಗಿಲುಗಳನ್ನು ಲಾಕ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ.
ಮಂಜು ಅವರು ಕೈಕಾಲುಗಳಿಂದ ಮುಖ, ಭುಜ ಹಾಗೂ ತೊಡೆಯ ಮೇಲೆ ಹೊಡೆದಿದ್ದು, ಮತ್ತೊಬ್ಬನು ಬೀರ್ ಬಾಟಲಿನಿಂದ ತಲೆಗೆ ಹೊಡೆದು ತೀವ್ರ ರಕ್ತಗಾಯ ಮಾಡಿದ್ದಾನೆ. ಇನ್ನೊಬ್ಬನು ಹೊಟ್ಟೆಗೆ, ಮುಖಕ್ಕೆ ಲಾತಿ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ನಂತರ ದೀಪಕ್ ಗೌಡ ಅವರನ್ನು ಸ್ಥಳೀಯ ಈಶಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪಿರ್ಯಾದಿದಾರರು ಒತ್ತಾಯಿಸಿದ್ದಾರೆ.
ಯಲಹಂಕ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

