ಸುದ್ದಿ 

ಬೆಂಗಳೂರಿನಲ್ಲಿ ಆಸ್ತಿ ಹಗರಣ – ಸ್ನೇಹಿತನ ವಿಶ್ವಾಸಕ್ಕೆ ಮೋಸ

Taluknewsmedia.com

ಬೆಂಗಳೂರು:
ನಗರದ ಜಾಲಹಳ್ಳಿ ಪ್ರದೇಶದಲ್ಲಿ ಮನೆ ಹೊಂದಿದ್ದ ಮಹಿಳೆ, ಆರ್ಥಿಕ ತೊಂದರೆಯಿಂದ ಸಾಲ ಪಡೆದು ತೀರಿಸಲಾಗದೆ ಸಂಕಷ್ಟಕ್ಕೀಡಾದ ವೇಳೆ, ಸಹಾಯ ಮಾಡುವ ನೆಪದಲ್ಲಿ ಸ್ನೇಹಿತ ಹಾಗೂ ಇತರರು ಸೇರಿ ಲಕ್ಷಾಂತರ ರೂಪಾಯಿಗಳ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅರುಣ್ ರವರ ಪ್ರಕಾರ, ಅವರು 2018ರಲ್ಲಿ ಶೇಷಾದ್ರಿಪುರಂನ ಎನ್.ಕೆ.ಜಿ.ಎಸ್.ಬಿ ಕೋ-ಆಪರೇಟಿವ್ ಸೊಸೈಟಿ ಬ್ಯಾಂಕ್ನಿಂದ ರೂ.40 ಲಕ್ಷ ಸಾಲ ಪಡೆದಿದ್ದರು. ಆದರೆ ಬಡ್ಡಿ ಸೇರಿ ರೂ.68 ಲಕ್ಷ ತೀರಿಸಲಾಗದೆ ಮನೆಯು ಹರಾಜಿಗೆ ಬಂದಿತ್ತು. ಈ ಸಂದರ್ಭದಲ್ಲಿ ಸ್ನೇಹಿತರ ಮೂಲಕ ಪರಿಚಯವಾದ ಆನಂದ್ ಹೆಚ್.ಆರ್ ಸಹಾಯ ಮಾಡುವುದಾಗಿ ಹೇಳಿ, “ಸ್ವತ್ತು ನನ್ನ ಹೆಸರಿಗೆ ಮಾಡಿಕೊಡಿ” ಎಂದು ನಂಬಿಸಿ, ಅರುಣ್ ರವರಿಂದ ಒಟ್ಟಾರೆ ರೂ.68 ಲಕ್ಷ ಪಡೆದುಕೊಂಡಿದ್ದಾನೆ.

ಆದರೆ, ಆ ಹಣವನ್ನು ಆರೋಪಿಗಳು (ಎ1 ರಿಂದ ಎ6) ತಮ್ಮಲ್ಲಿ ಹಂಚಿಕೊಂಡು, ಅರುಣ್ ರವರಿಗೆ ತಿಳಿವಳಿಕೆ ಇಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, 2019ರ ಜುಲೈ 12ರಂದು ಆನಂದ್ ಹೆಸರಿನಲ್ಲಿ ಸೇಲ್ ಡೀಡ್ ಮಾಡಿಸಿಕೊಂಡಿದ್ದಾರೆ ಎಂಬುದು ದೂರಿನಲ್ಲಿ ಹೇಳಲಾಗಿದೆ.

ಇಲ್ಲದೆ, ಮನೆಯಿಂದ ತೆರಳುವಂತೆ ಒತ್ತಡ ಹಾಕಲು ಆರೋಪಿಗಳು ಬಂದು, ಅರುಣ್ ರವರಿಗೂ ಹಾಗೂ ಅವರ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಎಸ್.ಸಿ. ಸಮುದಾಯಕ್ಕೆ ಸೇರಿದವರಾಗಿರುವುದರಿಂದ “ಕೀಳು ಜಾತಿಯವರು” ಎಂದು ಸಾರ್ವಜನಿಕವಾಗಿ ಅವಹೇಳನ ಮಾಡಿರುವುದರ ಜೊತೆಗೆ ದೈಹಿಕ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾದ ಪಿ.ಸಿ.ಆರ್ ನಂ-26/2025 ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ಸೂಚನೆ ನೀಡಲಾಗಿದೆ.

Related posts